Sat. Jun 6th, 2026

‘ಜಿಲ್ಲೆ ಹೆಸರು ಬದಲಾವಣೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ’: ರಾಜ್ಯ ಸರ್ಕಾರದ ವಿರುದ್ಧ ಆರ್‌‌. ಅಶೋಕ್ ತೀವ್ರ ವಾಗ್ದಾಳಿ

Share this with Friends

ಬೆಂಗಳೂರು: “ರಾಜ್ಯದ ವಿವಿಧ ಜಿಲ್ಲೆಗಳಿಗೆ ‘ಬೆಂಗಳೂರು’ ಹೆಸರನ್ನು ಜೋಡಿಸುವುದರಿಂದ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಮಾಡುವ ಯೋಗ್ಯತೆ ಇಲ್ಲದ ಕಾರಣ, ಹೆಸರು ಬದಲಾವಣೆಯ ರಾಜಕೀಯದ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗಳ ಮರುನಾಮಕರಣದ ಚರ್ಚೆ ಹಾಗೂ ಸರ್ಕಾರದ ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.

ಹೆಸರಿನ ಸ್ಪರ್ಧೆ ಹಾಸ್ಯಾಸ್ಪದ

“ಕನಕಪುರ ಭಾಗಕ್ಕೆ ಬೆಂಗಳೂರು ಹೆಸರು ಸೇರಿಸುವ ಪ್ರಸ್ತಾಪದ ಬೆನ್ನಲ್ಲೇ, ಈಗ ಎಲ್ಲ ಸಚಿವರಿಗೂ ತಮ್ಮ ತಮ್ಮ ಜಿಲ್ಲೆಗಳಿಗೆ ‘ಬೆಂಗಳೂರು’ ಎಂಬ ಹೆಸರನ್ನು ತಳುಕು ಹಾಕುವ ಸ್ಪರ್ಧೆ ಶುರುವಾಗಿದೆ. ಕೋಲಾರ, ಮಂಡ್ಯ, ಕರಾವಳಿ ಅಥವಾ ಉತ್ತರ ಕರ್ನಾಟಕ ಭಾಗಕ್ಕೆ ಬೆಂಗಳೂರು ಎಂದು ಹೆಸರಿಟ್ಟ ತಕ್ಷಣ ಅಲ್ಲಿ ಪ್ರಗತಿಯಾಗುತ್ತದೆಯೇ? ತುಮಕೂರು ಜಿಲ್ಲೆಯನ್ನು ‘ಬೆಂಗಳೂರು ಉತ್ತರ’ ಎಂದು ಮರುನಾಮಕರಣ ಮಾಡಬೇಕು ಎನ್ನುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮಾತು ತೀರಾ ಹಾಸ್ಯಾಸ್ಪದವಾಗಿದೆ. ಹೊಸ ಯೋಜನೆಗಳನ್ನು ತರದೆ, ಅನುದಾನ ನೀಡದೆ ಕೇವಲ ಹೆಸರನ್ನು ಬಳಸಿಕೊಂಡರೆ ಜನರು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಜಿಲ್ಲೆಗಳ ಮೂಲ ಹೆಸರನ್ನೇ ಮರುಸ್ಥಾಪಿಸಲಾಗುವುದು” ಎಂದು ಅಶೋಕ್ ಸ್ಪಷ್ಟಪಡಿಸಿದರು.

ಬೆಂಗಳೂರು ಮಹಾನಗರದ ತೆರಿಗೆ ಹಣವನ್ನು ತುಮಕೂರು ಅಥವಾ ರಾಮನಗರ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದರೂ ರಾಜಧಾನಿಯ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಮುಂಬರುವ ಜಿಬಿಎ (GBA) ಚುನಾವಣೆಯಲ್ಲಿ ಬೆಂಗಳೂರಿನ ಜನರೇ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ಬ್ರ್ಯಾಂಡ್ ಬೆಂಗಳೂರು ಈಗ ‘ಕಸದ ನಗರ’

ಸರ್ಕಾರವು ಬಿಡುಗಡೆ ಮಾಡಿರುವ ‘ಬ್ರ್ಯಾಂಡ್ ಬೆಂಗಳೂರು’ ಮತ್ತು ‘ಟನಲ್ ಬೆಂಗಳೂರು’ ಪರಿಕಲ್ಪನೆಗಳನ್ನು ಲೇವಡಿ ಮಾಡಿದ ಅಶೋಕ್, “ಇಂದು ರಾಜಧಾನಿಯು ಸಂಪೂರ್ಣವಾಗಿ ಕಸದ ನಗರ ಹಾಗೂ ಗುಂಡಿಗಳ ಬೆಂಗಳೂರಾಗಿ ಮಾರ್ಪಟ್ಟಿದೆ. ಮೂಲಸೌಕರ್ಯ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ದೂರಿದರು.

ಹೊಸ ಖಾತಾ ಗೊಂದಲ: ಹಣ ಮಾಡುವ ದಾರಿ?

ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಆಸ್ತಿ ಖಾತಾ ವ್ಯವಸ್ಥೆಯ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. “ಹಾಲಿನ ದರ, ವಿದ್ಯುತ್ ಶುಲ್ಕ, ಮದ್ಯದ ಮೇಲಿನ ತೆರಿಗೆ ಹಾಗೂ ಮನೆ ತೆರಿಗೆಯನ್ನು ಈಗಾಗಲೇ ಹೆಚ್ಚಿಸಿ ಜನಸಾಮಾನ್ಯರ ಕದ್ದ ಕಸಿಯಲಾಗಿದೆ. ಈಗ ಜನರು ತಮ್ಮ ಮನೆಗಳಿಗೆ ಎ-ಖಾತಾ, ಬಿ-ಖಾತಾ ಕೇಳುತ್ತಿದ್ದರೆ, ಸರ್ಕಾರ ‘ಇ-ಖಾತಾ’, ‘ಒ-ಖಾತಾ’ ಎಂಬ ಹೊಸ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲದ ಇಂತಹ ಹೊಸ ನಿಯಮಗಳ ಅಗತ್ಯವೇನಿತ್ತು? ಇದು ಕೇವಲ ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ದಾರಿಯಾಗಿದೆ. ಸಾರ್ವಜನಿಕರ ಈ ತೀವ್ರ ಆಕ್ರೋಶಕ್ಕೆ ಹೆದರಿ ಹಾಗೂ ಸೋಲಿನ ಭಯದಿಂದಲೇ ಸರ್ಕಾರ ಜಿಬಿಎ ಚುನಾವಣೆಯನ್ನು ಪದೇ ಪದೇ ಮುಂದೂಡುತ್ತಾ ಬಂದಿದೆ” ಎಂದು ಅಶೋಕ್ ಟೀಕಿಸಿದರು.

 


Share this with Friends

Related Post