Tue. Jul 21st, 2026

ಧಾರವಾಡ ಆಟೋ ಎಲ್‌ಪಿಜಿ ಪೂರೈಕೆ ವ್ಯತ್ಯಯ; ವಿಶೇಷ ನೋಡಲ್ ಅಧಿಕಾರಿ ನೇಮಕಕ್ಕೆ ಸೂಚನೆ

Share this with Friends

ಧಾರವಾಡ/ನವದೆಹಲಿ:ಧಾರವಾಡದಲ್ಲಿ ಗ್ಯಾಸ್ ಸರಬರಾಜಿನ ಮೇಲೆ ನಿರಂತರ ನಿಗಾ ಇಡಲು ಮತ್ತು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ಒಬ್ಬ ವಿಶೇಷ ನೋಡಲ್ ಅಧಿಕಾರಿಯನ್ನು (Nodal Officer) ತಕ್ಷಣವೇ ನೇಮಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ ಜಿಲ್ಲೆಯಲ್ಲಿ ಆಟೋರಿಕ್ಷಾಗಳಿಗೆ ಎಲ್‌ಪಿಜಿ ಅನಿಲ ಪೂರೈಕೆಯಲ್ಲಿ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಇಂದು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಆಟೋ ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು, ಗ್ಯಾಸ್ ಪೂರೈಕೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯ ಪ್ರಮುಖಾಂಶಗಳು:

ಖಾಸಗಿ ಕಂಪನಿಗಳು ಎಲ್‌ಪಿಜಿ ದರದಲ್ಲಿ ಹಠಾತ್ ಏರಿಕೆ ಮಾಡುತ್ತಿರುವುದು, ಗ್ರಾಹಕರಿಗೆ ಅಧಿಕೃತ ರಸೀದಿ ನೀಡದಿರುವುದು ಮತ್ತು ಸ್ಟಾಕ್ ಇದ್ದರೂ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿರುವ ಬಗ್ಗೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಜೋಷಿಯವರು, ಗ್ಯಾಸ್ ದರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಮತ್ತು ಪ್ರತಿ ವಹಿವಾಟಿಗೂ ರಸೀದಿ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ನೋಡಲ್ ಅಧಿಕಾರಿ ನೇಮಕ:

ಗ್ಯಾಸ್ ಸರಬರಾಜಿನ ಮೇಲೆ ನಿರಂತರ ನಿಗಾ ಇಡಲು ಮತ್ತು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ಒಬ್ಬ ವಿಶೇಷ ನೋಡಲ್ ಅಧಿಕಾರಿಯನ್ನು (Nodal Officer) ತಕ್ಷಣವೇ ನೇಮಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಅಧಿಕಾರಿಯು ಪೂರೈಕೆಯ ಸ್ಥಿತಿಗತಿಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಿ, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕೆಂದು ತಿಳಿಸಿದರು.

“ಧಾರವಾಡದ ಆಟೋ ಚಾಲಕರಿಗೆ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದು. ಗ್ಯಾಸ್ ಕಂಪನಿಗಳ ಏಕಪಕ್ಷೀಯ ನಿರ್ಧಾರಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಪ್ರಹ್ಲಾದ್ ಜೋಷಿ ಅವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

 


Share this with Friends

Related Post