Fri. Jul 17th, 2026

ಡಿ.31ರೊಳಗೆ ಜಿಬಿಎ ಎಲೆಕ್ಷನ್, ಮಾರ್ಚ್ ಒಳಗೆ ಪಂಚಾಯತ್ ಚುನಾವಣೆ: ದೆಹಲಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಪ್ರಕಟಣೆ!

Share this with Friends

ನವದೆಹಲಿ: ಕರ್ನಾಟಕದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ನವದೆಹಲಿಯ ಕಾಂಗ್ರೆಸ್ ಪಕ್ಷದ ಹಳೇ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ್ದು, ನಿಗದಿತ ಅವಧಿಯಲ್ಲೇ ಎಲ್ಲಾ ಚುನಾವಣೆಗಳನ್ನು ಪೂರ್ಣಗೊಳಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 31ರೊಳಗೆ ಜಿಬಿಎ ಚುನಾವಣೆ

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಡಿಸೆಂಬರ್ 31, 2026 ರವರೆಗೆ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಸುಪ್ರೀಂ ಕೋರ್ಟ್ ಈ ಗಡುವನ್ನು ವಿಸ್ತರಿಸಿದ್ದು, ಡಿ.31 ರೊಳಗೆ ಜಿಬಿಎ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ ಎಂದು ಸಿಎಂ ತಿಳಿಸಿದರು.

ಮಾರ್ಚ್ ಅಂತ್ಯದೊಳಗೆ ಪಂಚಾಯತ್, ಮುನಿಸಿಪಾಲಿಟಿ ಚುನಾವಣೆ

ಜಿಬಿಎ ಚುನಾವಣೆಗಳ ಬೆನ್ನಲ್ಲೇ ರಾಜ್ಯದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಮುನಿಸಿಪಾಲಿಟಿ ಚುನಾವಣೆಗಳನ್ನು ಮುಂಬರುವ ಮಾರ್ಚ್ ಅಂತ್ಯದೊಳಗೆ ಹಂತ ಹಂತವಾಗಿ ನಡೆಸಿ ಮುಗಿಸಲು ಸರ್ಕಾರ ತೀರ್ಮಾನಿಸಿದೆ.

ಹೊಸ ಮುಖ ಹಾಗೂ ಯುವಕರಿಗೆ ಬಂಪರ್ ಅವಕಾಶ

ಅಧಿಕಾರ ವಿಕೇಂದ್ರೀಕರಣವನ್ನು ಬಲಪಡಿಸಲು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸಲು ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುವುದು. ಈ ಬಾರಿಯ ಪಂಚಾಯತ್‌ನಿಂದ ಕಾರ್ಪೊರೇಷನ್‌ವರೆಗಿನ ಎಲ್ಲಾ ಚುನಾವಣೆಗಳಲ್ಲೂ ಯುವಕರಿಗೆ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು.

ಶನಿವಾರ ಮಲ್ಲಿಕಾರ್ಜುನ ಖರ್ಗೆ ಭೇಟಿ: ಸಂಪುಟ ವಿಸ್ತರಣೆ ಸಮಾಲೋಚನೆ

ಕರ್ನಾಟಕ ಸಚಿವ ಸಂಪುಟದ ವಿಸ್ತರಣೆಗೆ ಸಂಬಂಧಿಸಿದಂತೆ ಈಗಾಗಲೇ ದೆಹಲಿಯಲ್ಲಿ ಪಕ್ಷದ ಹಿರಿಯ ವರಿಷ್ಠರೊಂದಿಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಲಾಗಿದೆ. ಅನಿವಾರ್ಯ ಕಾರಣಗಳಿಂದಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಇಂದು ಸಾಧ್ಯವಾಗಿಲ್ಲ. ಹೀಗಾಗಿ ಶನಿವಾರ ಅವರನ್ನು ಅಧಿಕೃತವಾಗಿ ಭೇಟಿಯಾಗಿ, ವರಿಷ್ಠರ ಸಂಪೂರ್ಣ ಮಾರ್ಗದರ್ಶನ ಪಡೆದು ಸಂಪುಟ ವಿಸ್ತರಣೆಯ ಮುಂದಿನ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

“ಎಐಸಿಸಿ ಕಚೇರಿ ನಮಗೆ ದೇವಾಲಯವಿದ್ದಂತೆ”

ಎಐಸಿಸಿ ಕಚೇರಿಯೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಸಿಎಂ, “ಎಐಸಿಸಿ ಕಾರ್ಯಾಲಯವು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೂ ಒಂದು ಪವಿತ್ರ ದೇವಾಲಯವಿದ್ದಂತೆ. ನಾವು ಅದರ ನೆರಳಿನಲ್ಲೇ ಬೆಳೆದಿದ್ದೇವೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಈ ಕಚೇರಿಯಲ್ಲಿ ಭೇಟಿಯಾಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದರು.

 

 


Share this with Friends

Related Post