ಬೆಂಗಳೂರು:”ರಾಜಕಾರಣದ ಚದುರಂಗದಾಟದಲ್ಲಿ ಯಾರು ಯಾವ ರೀತಿ ಕಾಯಿ ನಡೆಸುತ್ತಾರೆ ಎಂದು ಯಾರಾದರೂ ಮೊದಲೇ ಹೇಳುತ್ತಾರೆಯೇ? ಖಂಡಿತಾ ಯಾರೂ ಹೇಳುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯ ರಾಜಕೀಯದ ಸದ್ಯದ ವಿದ್ಯಮಾನಗಳ ಕುರಿತು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.
ಪರಿಷತ್ ಚುನಾವಣೆ ಲೆಕ್ಕಾಚಾರ
ವಿಧಾನಪರಿಷತ್ ಚುನಾವಣೆಯಲ್ಲಿ ವಿನಯ್ ಕಾರ್ತಿಕ್ ಅವರ ಸ್ಪರ್ಧೆ ಹಾಗೂ ಜೆಡಿಎಸ್ ಪಕ್ಷವು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ಚದುರಂಗದಾಟದ ಉದಾಹರಣೆ ನೀಡಿದರು. ಚುನಾವಣಾ ಕಣದಲ್ಲಿ ಪಕ್ಷಗಳು ರೂಪಿಸುವ ಆಂತರಿಕ ತಂತ್ರಗಾರಿಕೆಗಳು ಮತ್ತು ರಾಜಕೀಯ ನಡೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದರು.
ದೇವೇಗೌಡರ ರಾಜ್ಯಸಭೆ ಟಿಕೆಟ್ ವಿವಾದ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಿ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಮಾಡಿರುವ ಟೀಕೆಗಳ ಬಗ್ಗೆಯೂ ಸಿಎಂ ಗಮನ ಸೆಳೆಯಲಾಯಿತು. ಈ ವಿಷಯದ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿ.ಕೆ. ಶಿವಕುಮಾರ್, “ನಾನು ಸದ್ಯಕ್ಕೆ ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಸುರ್ಜೆವಾಲಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಆದರೆ ನಾನು ಆ ಕುರಿತು ಚರ್ಚಿಸಲು ಹೋಗುವುದಿಲ್ಲ. ನಾನು ಕೇವಲ ನಮ್ಮ ಪಕ್ಷದ ಸಿದ್ಧಾಂತ ಮತ್ತು ಚಿಂತನೆಯನ್ನು ಮಾತ್ರ ಪಾಲನೆ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.
2028 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ:
“ಪಕ್ಷಬೇಧ ಮರೆತು ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗಿ. 2028 ರ ವಿಧಾನಸಭೆ ಚುನಾವಣೆ ಗೆಲ್ಲುವುದು ನಿಮ್ಮ ಗುರಿಯಾಗಿರಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಮಾಜಿ ಶಾಸಕ ಮಂಜುನಾಥ್ ಹಾಗೂ ಮೈಸೂರು ಮುಖಂಡ, ವಕ್ತಾರ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಹುಣಸೂರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕುಮಾರಪಾರ್ಕ್ ಸರಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಅಭಿನಂದಿಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
ಹಿಂದೆ ಆಗಿದ್ದು, ದ್ವೇಷ, ಅಸೂಯೆ, ಪ್ರತೀಕಾರ ಎಂಬುದನ್ನು ಮರೆಯಿರಿ. ಕೆಲವೊಮ್ಮೆ ತಪ್ಪು ಮಾಹಿತಿ, ಅಭಿಪ್ರಾಯಗಳಿಂದ ಯಡವಟ್ಟು ಆಗಿರಬಹುದು. ಆದರೆ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಭವಿಷ್ಯದ ಗುರಿ ಮರೆಯಬೇಡಿ ಎಂದರು.
ಇವತ್ತು ಬಂದಿರುವ ಸಿಎಂ ಹುದ್ದೆ ನನ್ನದಲ್ಲ. ನಿಮ್ಮದು, ರಾಜ್ಯದ ಜನರದು. ನೀವು ಇಲ್ಲ ಅಂದ್ರೆ ನಾನು ಇಲ್ಲ. ನನಗೆ ಬಂದಿರುವ ಈ ಹುದ್ದೆ ಹಿಂದೆ ನಿಮ್ಮ ಪರಿಶ್ರಮ, ಪ್ರೀತಿ, ವಿಶ್ವಾಸ, ಹೋರಾಟ ಕೆಲಸ ಮಾಡಿದೆ. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಈಗ ಯಾವುದೇ ಕಾರಣಕ್ಕೂ ಮೈ ಮರೆಯಬೇಡಿ. ಎಸ್ ಐ ಆರ್ ಸಂಚಿಗೆ ನಿಮ್ಮ ಮತ ಬಲಿ ಆಗಲು ಬಿಡಬೇಡಿ. ಎಚ್ಚರಿಕೆಯಿಂದ ಇರಿ. ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ ಎಂದರು.

