Fri. Jun 5th, 2026

ಕೇಂದ್ರದ ಬೆಲೆಯೇರಿಕೆಗೆ ಕಾಂಗ್ರೆಸ್ ಗ್ಯಾರಂಟಿಯೇ ಆಸರೆ: ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

Share this with Friends

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ನಿರಂತರ ಬೆಲೆಯೇರಿಕೆಯ ಮೂಲಕ ಸಾರ್ವಜನಿಕರ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಕೈ ಹಿಡಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವೇ ಮುಕ್ತಕಂಠದಿಂದ ಶ್ಲಾಘಿಸಿದೆ. ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯೂ ಸಹ ಈ ಯೋಜನೆಗಳ ಆರ್ಥಿಕ ಸಾಮಾಜಿಕ ಭದ್ರತೆಯನ್ನು ಪ್ರಶಂಸಿಸಿದೆ. ಪ್ರಸ್ತುತ ದೇಶದಲ್ಲಿ ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರುತ್ತಿದೆ. ವಾಣಿಜ್ಯ ಸಿಲಿಂಡರ್ ದರಗಳ ವಿಪರೀತ ಹೆಚ್ಚಳದಿಂದಾಗಿ ರಾಜ್ಯದ ಹಲವು ಹೋಟೆಲ್‌ಗಳು ಆರ್ಥಿಕ ನಷ್ಟ ಅನುಭವಿಸಿ ಭಾಗಶಃ ಮುಚ್ಚುವ ಸ್ಥಿತಿಗೆ ತಲುಪಿವೆ ಎಂದು ಡಿಸಿಎಂ ಕಳವಳ ವ್ಯಕ್ತಪಡಿಸಿದರು.

ವಾಣಿಜ್ಯ ಸಿಲಿಂಡರ್ ದರ ಏರಿಕೆಯ ಗ್ರಾಫ್:

ಪ್ರಸಕ್ತ ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಿಲಿಂಡರ್ ದರ ಏರಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಿದ ಅವರು, ಮಾರ್ಚ್ 1 ರಂದು ₹28, ಮಾರ್ಚ್ 7 ರಂದು ₹114.50, ಮಾರ್ಚ್ 23 ರಂದು ₹49 ಹೆಚ್ಚಳ ಮಾಡಲಾಗಿದೆ. ಇನ್ನು ಏಪ್ರಿಲ್ 1 ರಂದು ₹195 ರಿಂದ ₹218 ರವರೆಗೆ ಹಾಗೂ ಮೇ 1 ರಂದು ಒಂದೇ ಬಾರಿಗೆ ಬರೋಬ್ಬರಿ ₹993 ರಷ್ಟು ದರ ಏರಿಕೆ ಮಾಡುವ ಮೂಲಕ ಹೋಟೆಲ್ ಉದ್ಯಮ ಮತ್ತು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.

ತೆರಿಗೆ ಹೆಸರಿನಲ್ಲಿ ನಿತ್ಯ ₹1,000 ಕೋಟಿ ಸುಲಿಗೆ:

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಇಳಿಕೆಯಾಗಿದ್ದರೂ ಸಹ ದೇಶದಲ್ಲಿ ಇಂಧನ ದರಗಳನ್ನು ಕಡಿಮೆ ಮಾಡಿಲ್ಲ. ಕೇವಲ ಇಂಧನದ ಮೇಲಿನ ತೆರಿಗೆಯೊಂದರಿಂದಲೇ ಕೇಂದ್ರ ಸರ್ಕಾರ ದಿನಕ್ಕೆ ₹1,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ಈ ತೆರಿಗೆಯನ್ನು ಕಡಿತಗೊಳಿಸಿ ಜನರಿಗೆ ನಿರಾಳತೆ ನೀಡಬಹುದಿತ್ತು. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ₹7.52 ರಷ್ಟು ಹೆಚ್ಚಿಸಿರುವುದು ಸಾಮಾನ್ಯ ಜನರ ಬದುಕಿಗೆ ಶಾಪವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ವಿಪಕ್ಷ ನಾಯಕರ ವಿರುದ್ಧ ಕಿಡಿ:

ಕೇಂದ್ರದ ಇಂತಹ ಆರ್ಥಿಕ ಸುಲಿಗೆಯ ವಿರುದ್ಧ ಕಾಂಗ್ರೆಸ್ ಸತತವಾಗಿ ಹೋರಾಟ ಹಾಗೂ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅರಿಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರಕ್ಕೆ ತೆರಿಗೆ ಇಳಿಸುವಂತೆ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಕಡೆಗೆ ಬೆರಳು ಮಾಡುವುದನ್ನು ಬಿಟ್ಟು, ಮೊದಲು ಕೇಂದ್ರದ ಮೂಲಕ ಆಗುತ್ತಿರುವ ಇಂಧನ ಹಾಗೂ ಸಿಲಿಂಡರ್ ದರ ಸುಲಿಗೆಯನ್ನು ನಿಲ್ಲಿಸಲು ಒತ್ತಾಯಿಸಲಿ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಗ್ಯಾರಂಟಿ ಯೋಜನೆಗಳ ಕಟ್ಟುನಿಟ್ಟಿನ ಪರಿಶೀಲನೆ:

ರಾಜ್ಯದ ಜನಪ್ರಿಯ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡಿದ ಡಿಸಿಎಂ, ಯೋಜನೆಗಳಲ್ಲಿ ನಡೆಯುತ್ತಿರುವ ದುರ್ಬಳಕೆಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಿಸಿದರು. “ಕೆಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಿದ್ದು, ಸುಮಾರು ₹100 ಕೋಟಿಯಷ್ಟು ಹಣ ದುರುಪಯೋಗವಾಗಿರುವ ಶಂಕೆ ಇದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು ಪ್ರಸ್ತುತ ತಾಲೂಕು ಮಟ್ಟದಲ್ಲಿ ದಾಖಲೆಗಳ ಮರುಪರಿಶೀಲನೆ ನಡೆಸಲಾಗುತ್ತಿದೆ,” ಎಂದು ಅವರು ಸ್ಪಷ್ಟಪಡಿಸಿದರು.

ಅನ್ನಭಾಗ್ಯ ಯೋಜನೆಗೆ ಕೇಂದ್ರದ ಅಸಹಕಾರ:

ಕಳೆದ ಎರಡು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯಲ್ಲಿ ಉಂಟಾಗಿರುವ ವ್ಯತ್ಯಯಕ್ಕೆ ಕೇಂದ್ರ ಸರ್ಕಾರದ ಧೋರಣೆಯೇ ಕಾರಣ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು. ಕೇಂದ್ರ ಸರ್ಕಾರವು ಅಕ್ಕಿ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಿಗೂ ಇದೇ ರೀತಿ ತಾರತಮ್ಯ ಎಸಗಲಾಗುತ್ತಿದೆ ಎಂದು ಅವರು ದೂರಿದರು.

2028ರ ಚುನಾವಣೆಯ ಭವಿಷ್ಯ:

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕುರಿತು ವಿರೋಧ ಪಕ್ಷಗಳ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಡಿಸಿಎಂ, ಭವಿಷ್ಯ ನುಡಿದರು. “ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನಾಯಕರು ತಮಗೆ ಬಹುಮತ ಬರಲಿದೆ ಎಂದು ಸೂಟು-ಬೂಟು ಸಿದ್ಧಪಡಿಸಿಕೊಂಡಿದ್ದರು. ಆದರೆ ನಾನು ಹೇಳಿದಂತೆಯೇ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು. ಈಗಲೂ ಬರೆದಿಟ್ಟುಕೊಳ್ಳಿ, 2028ರಲ್ಲೂ ಇದೇ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ಪ್ರವಾಸ ಮತ್ತು ಸಿಎಂ ಸ್ಥಾನದ ಚರ್ಚೆ:

ಮುಖ್ಯಮಂತ್ರಿಗಳ ದೆಹಲಿ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಪಕ್ಷದ ಹೈಕಮಾಂಡ್‌ನಿಂದ ಕರೆ ಬಂದರೆ ನಾನು ಕೂಡ ದೆಹಲಿಗೆ ತೆರಳಲು ಸಿದ್ಧನಿದ್ದೇನೆ” ಎಂದರು. ಆದರೆ, ರಾಜ್ಯದ ನಾಯಕತ್ವ ಬದಲಾವಣೆ ಅಥವಾ ಮುಖ್ಯಮಂತ್ರಿ ಸ್ಥಾನದ ಕುರಿತಾದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

 

 


Share this with Friends

Related Post