ಬೆಂಗಳೂರು: “ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಭಾರಿ ಪ್ರಮಾಣದಲ್ಲಿ ಆಸ್ತಿ ಮಾಡಿಕೊಂಡಿರುವುದು ಹೆಚ್.ಡಿ. ಕುಮಾರಸ್ವಾಮಿ ಅವರ ಕುಟುಂಬದವರೇ ಹೊರತು ಬೇರೆಯವರಲ್ಲ. ಪೆರಿಫೆರಲ್ ರಿಂಗ್ ರಸ್ತೆ (PRR) ಭಾಗದಲ್ಲಿ ಜನರನ್ನು ಹೆದರಿಸಿ ಆಸ್ತಿಗಳನ್ನು ಬರೆಸಿಕೊಳ್ಳುವ ಕೆಲಸವನ್ನು ಅವರ ಸ್ವಂತ ಅಣ್ಣನೇ ಮಾಡಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಖಾತಾ ಪರಿವರ್ತನೆ ಹಾಗೂ ಬಿಡದಿ ಟೌನ್‌ಶಿಪ್ ವಿಚಾರವಾಗಿ ಕುಮಾರಸ್ವಾಮಿ ಅವರು ಮಾಡಿರುವ ಟೀಕೆಗಳಿಗೆ ಕಠಿಣ ಪದಗಳಲ್ಲಿ ಮರುಪ್ರಶ್ನಿಸಿದರು. ಶುಲ್ಕ ಪಾವತಿಸಿ ಈಗಲೇ ಇ-ಖಾತಾ ಬದಲಾವಣೆ ಮಾಡಿಕೊಳ್ಳಬೇಡಿ, ಮುಂಬರುವ ದಿನಗಳಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಜೆಡಿಎಸ್ ನಾಯಕನ ಹೇಳಿಕೆಯನ್ನು ಉಲ್ಲೇಖಿಸಿ, “ಕುಮಾರಸ್ವಾಮಿ ಅವರು ಬರೀ ಹಗಲುಗನಸು ಕಾಣುತ್ತಿದ್ದಾರೆ. ಅವರ ಸರ್ಕಾರ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ಭದ್ರವಾಗಿದ್ದು, ಜನಪರ ಕೆಲಸಗಳನ್ನು ಮಾಡುತ್ತಿದೆ. ಸಾರ್ವಜನಿಕರು ಕೂಡ ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಪಿಆರ್‌ಆರ್ ನೆಪದಲ್ಲಿ ದಂಧೆ ನಡೆದಿದೆ:
ಬಿಡದಿ ಟೌನ್‌ಶಿಪ್ ಯೋಜನೆಗೆ ತಾವೇ ಸ್ವತಃ ಅಧಿಸೂಚನೆ ಹೊರಡಿಸಿ, ಈಗ ಆ ಯೋಜನೆ ಬೇಡ ಎನ್ನುತ್ತಿರುವ ಕುಮಾರಸ್ವಾಮಿ ಅವರ ನಿಲುವಿನಲ್ಲಿ ಯಾವುದೇ ನೈತಿಕತೆ ಇಲ್ಲ ಎಂದ ಡಿಸಿಎಂ, “ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವವರು ಯಾರು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಬೆಂಗಳೂರಿನ ದೊಡ್ಡ ಗುಬ್ಬಿ ಹಾಗೂ ಚಿಕ್ಕ ಗುಬ್ಬಿ ಭಾಗಗಳಲ್ಲಿ ವಿಚಾರಿಸಿದರೆ ಸತ್ಯ ತಿಳಿಯುತ್ತದೆ. ಅಲ್ಲಿನ ಜನರನ್ನು ಭಯಭೀತಗೊಳಿಸಿ, ಅಂದಿನ ದಿನಗಳಲ್ಲಿ ತಲಾ ₹7, ₹8 ಹಾಗೂ ₹10 ಲಕ್ಷದ ಅತ್ಯಂತ ಕಡಿಮೆ ದರಕ್ಕೆ ಇವರ ಅಣ್ಣ ಎಲ್ಲ ಆಸ್ತಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇಂದು ಆ ಜಮೀನುಗಳ ಮಾರುಕಟ್ಟೆ ಮೌಲ್ಯ ₹25 ರಿಂದ ₹50 ಕೋಟಿ ರೂಪಾಯಿಗಳಷ್ಟಾಗಿದೆ. ಇಂತಹ ಇತಿಹಾಸ ಇಟ್ಟುಕೊಂಡು ಅವರು ಬೇರೆಯವರ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ” ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮರೆಮಾಚಲು ಜೆಡಿಎಸ್ ನಾಯಕರಿಂದ ಟೀಕೆ:
“ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳು ಗಗನಕ್ಕೇರಿವೆ. ಪ್ರಧಾನಿ ಮೋದಿಯವರು ಜನರು ಚಿನ್ನ ಖರೀದಿ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇಂತಹ ಗಂಭೀರ ಜನಸಾಮಾನ್ಯರ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡದ ಜೆಡಿಎಸ್ ನಾಯಕರು, ಕೇವಲ ರಾಜಕೀಯ ಪ್ರಚಾರಕ್ಕಾಗಿ ಬೇರೆಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
“ಜೆಡಿಎಸ್ ಅಧಿಕಾರದಲ್ಲಿದ್ದಾಗ ಬಡವರಿಗಾಗಿ ಒಂದೇ ಒಂದು ಜನಪರ ಕೆಲಸವನ್ನಾದರೂ ಮಾಡಿದ್ದಾರಾ? ಅವರಿಗೆ ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರು ಒದಗಿಸಲು ಕೂಡ ಸಾಧ್ಯವಾಗಿರಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಕಾವೇರಿ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಪಾರದರ್ಶಕಗೊಳಿಸಲು ಇ-ಖಾತಾ ಅಭಿಯಾನ ಆರಂಭಿಸಿದ್ದೇವೆ. ಬೆಂಗಳೂರು ನಗರದ ಆಡಳಿತ ಸುಧಾರಣೆಗೆ ಐದು ಪ್ರತ್ಯೇಕ ಪಾಲಿಕೆಗಳನ್ನು ರಚಿಸಿದ್ದೇವೆ. ನಮ್ಮ ಆಡಳಿತದ ಉತ್ತಮ ಕೆಲಸಗಳನ್ನು ಕಂಡು ಬಿಜೆಪಿಯವರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅವರ ಸಲಹೆಗಳನ್ನು ಪಡೆದೇ ನಾವು ಮುಂದುವರಿಯುತ್ತಿದ್ದೇವೆ” ಎಂದು ತಿಳಿಸಿದರು.
“ನಮ್ಮ ಅವಧಿಯಲ್ಲಿ ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಮಗೆ ಅವಕಾಶ ಸಿಗಲಿಲ್ಲವಲ್ಲ ಎಂಬ ಅಸೂಯೆ ಮತ್ತು ಹೊಟ್ಟೆಯುರಿಯಿಂದಾಗಿ ಜೆಡಿಎಸ್‌ನವರು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಪ್ರಗತಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಡಿಸಿಎಂ ಆಕ್ರೋಶ ಹೊರಹಾಕಿದರು.
ಇದೇ ವೇಳೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾಡಿದ್ದ “ಜನ್ಮದಿನಕ್ಕೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಕೆಲವರು ಕನಸು ಕಾಣುತ್ತಿದ್ದರು” ಎಂಬ ವ್ಯಂಗ್ಯದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, “ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಹಿಂದೆ ಅವರ ಸ್ವಂತ ಮಗ (ಎಚ್.ಡಿ. ಕುಮಾರಸ್ವಾಮಿ) ಬಿಜೆಪಿಗೆ ಹೇಗೆ ವಂಚಿಸಿದ್ದರು ಮತ್ತು ಏನು ಮಾಡಿದ್ದರು ಎಂಬುದನ್ನು ದೇವೇಗೌಡರು ಮೊದಲು ಸ್ಮರಿಸಿಕೊಳ್ಳಲಿ. ಆ ಇತಿಹಾಸ ನೆನಪಿಸಿಕೊಂಡು ನಂತರ ಬೇರೆಯವರ ನೈತಿಕತೆಯ ಬಗ್ಗೆ ಮಾತನಾಡಲಿ” ಎಂದು ಕಠಿಣ ಪದಗಳಲ್ಲಿ ತಿರುಗೇಟು ನೀಡಿದರು.

