Sat. Jun 6th, 2026

ಏಕಾತ್ಮ ಮಾನವ ದರ್ಶನ ಭಾರತದ ಆತ್ಮವಿದ್ದಂತೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share this with Friends

ಮೈಸೂರು: ಪಂಡಿತ ದೀನದಯಾಳ ಉಪಾಧ್ಯಾಯರು ಪ್ರತಿಪಾದಿಸಿದ ‘ಏಕಾತ್ಮ ಮಾನವ ದರ್ಶನ’ವು ಕೇವಲ ಒಂದು ಸಿದ್ಧಾಂತವಲ್ಲ, ಅದು ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್ಒಯು) ‘ಪ್ರಜ್ಞಾ ಪ್ರವಾಹ’ ಕರ್ನಾಟಕ ವತಿಯಿಂದ ಆಯೋಜಿಸಲಾಗಿದ್ದ ‘ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಗ್ರ ಜೀವನ ದೃಷ್ಟಿಕೋನ:

“ಭಾರತೀಯ ಜೀವನ ಮೌಲ್ಯಗಳನ್ನು ಆಧರಿಸಿದ ಈ ದರ್ಶನವು ಜಗತ್ತಿಗೆ ಸಮಗ್ರ ದೃಷ್ಟಿಕೋನವನ್ನು ನೀಡುತ್ತದೆ. ಆರು ದಶಕಗಳ ಹಿಂದೆಯೇ ದೀನದಯಾಳರು ನೀಡಿದ ಈ ಚಿಂತನೆ, ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಭಾರತದ ಮಹಾನ್ ಪರಂಪರೆಯು ಕಾಲಕಾಲಕ್ಕೆ ಜಗತ್ತಿಗೆ ದಾರಿದೀಪವಾಗಿದೆ,” ಎಂದು ರಾಜ್ಯಪಾಲರು ತಿಳಿಸಿದರು.

ಮಾನವನೇ ಕೇಂದ್ರಬಿಂದು:

“ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮದ ಸಂಗಮವಾಗಿರುವ ಮಾನವನೇ ಈ ದರ್ಶನದ ಕೇಂದ್ರಬಿಂದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳ ಸಾಧನೆಯ ಜೊತೆಗೆ, ಸಮಾಜದ ವಿವಿಧ ಸ್ತರಗಳನ್ನು ಬೆಸೆಯುವ ಶಕ್ತಿ ಈ ಚಿಂತನೆಗಿದೆ. ಸಮಾಜವು ಒಂದು ಜೀವಂತ ಘಟಕವಾಗಿದ್ದು, ದೇಹದ ಅಂಗಾಂಗಗಳು ಹೇಗೆ ಸಮನ್ವಯದಿಂದ ಕೆಲಸ ಮಾಡುತ್ತವೆಯೋ, ಹಾಗೆಯೇ ಸಮಾಜದ ಪ್ರತಿ ವರ್ಗವೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ರಾಷ್ಟ್ರದ ವಿಕಾಸ ಸಾಧ್ಯ,” ಎಂದು ಅವರು ಹೇಳಿದರು.

ಪಂಡಿತ ದೀನದಯಾಳ ಉಪಾಧ್ಯಾಯರಂತಹ ಮಹಾನ್ ವಿಭೂತಿ ಪುರುಷರ ಚಿಂತನೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಅವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಬಾಲ್ಯದ ಸಂಕಷ್ಟದಲ್ಲೂ ರಾಷ್ಟ್ರಪ್ರೇಮ ಮೆರೆದವರು:

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, “ದೀನದಯಾಳರು ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡರೂ ಜೀವನೋತ್ಸಾಹ ಕುಂದಿಸಿಕೊಳ್ಳದೆ ರಾಷ್ಟ್ರಪ್ರೇಮವನ್ನು ಉಸಿರಾಡಿದವರು. ರಾಜಕೀಯದಲ್ಲಿ ಮೌಲ್ಯಾಧಾರಿತ ಪ್ರಜ್ಞೆ ಮತ್ತು ಗ್ರಾಮಗಳ ಸುಸ್ಥಿರ ಅಭಿವೃದ್ಧಿಗೆ ಅವರ ‘ಅಂತ್ಯೋದಯ’ ಕಲ್ಪನೆ ಅತ್ಯಂತ ಪೂರಕವಾಗಿದೆ. ಭೌತಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಮೇಳೈಸುವ ಅವರ ಚಿಂತನೆಗಳು ಇಂದಿನ ಜಗತ್ತಿಗೆ ಶಾಂತಿ ಮಂತ್ರವಾಗಿವೆ,” ಎಂದರು.

2047ರ ವಿಕಸಿತ ಭಾರತಕ್ಕೆ ದೀನದಯಾಳರ ಆಶಯವೇ ಅಡಿಪಾಯ:

ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, “ಒತ್ತಡದ ಇಂದಿನ ದಿನಗಳಲ್ಲಿ ಧರ್ಮದ ಮೂಲಕ ಜೀವನವನ್ನು ಸಮೃದ್ಧಗೊಳಿಸುವ ದಾರಿಯನ್ನು ಏಕಾತ್ಮ ಮಾನವ ದರ್ಶನ ತೋರಿಸುತ್ತದೆ. 2047ರ ವಿಕಸಿತ ಭಾರತದ ಕಲ್ಪನೆಯು ಕೇವಲ ಆರ್ಥಿಕ ಅಥವಾ ತಾಂತ್ರಿಕ ಬೆಳವಣಿಗೆಯಲ್ಲ, ಅದು ದೀನದಯಾಳರು ಆಶಿಸಿದ ಸರ್ವಾಂಗೀಣ ವಿಕಾಸವಾಗಿದೆ. ಇದು ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ನೆನಪಿಸುತ್ತದೆ,” ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ವಿಷಯ ತಜ್ಞರು, ಗಣ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಭಾರತೀಯ ವಿಶ್ವದೃಷ್ಟಿಯ ಕುರಿತು ಚರ್ಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಜ್ಞಾಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ.ಪ್ರದೀಪ ಭಾರದ್ವಾಜ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ನವೀನಕುಮಾರ ಎಸ್ ಕೆ, ನವದೆಹಲಿಯ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿನಯಕುಮಾರ್ ಸಿಂಗ ಉಪಸ್ಥಿತರಿದ್ದರು.


Share this with Friends

Related Post