Fri. Aug 28th, 2026

ಉದ್ಯೋಗ ಸೃಷ್ಟಿಸಿ, 15 ದಿನಗಳಲ್ಲಿ ಕೂಲಿ ಹಣ ನೀಡಿ; ವಿಳಂಬವಾದರೆ ಪಿಡಿಒಗಳಿಗೆ ದಂಡ: ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಆದೇಶ

Share this with Friends

ಬೆಂಗಳೂರು: ರಾಜ್ಯದ 101 ತಾಲ್ಲೂಕುಗಳಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಗ್ರಾಮೀಣ ಭಾಗದ ಜನರಿಗೆ ಬೇಡಿಕೆಗೆ ಅನುಗುಣವಾಗಿ ‘ವಿಬಿಜಿ ರಾಮ್ ಜಿ’ ಯೋಜನೆಯಡಿ ತಕ್ಷಣವೇ ಉದ್ಯೋಗ ಒದಗಿಬೇಕು ಮತ್ತು ಕೆಲಸ ಮುಗಿದ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಕೂಲಿ ಹಣ ಪಾವತಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನದ ಕುರಿತು ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರತಿಯೊಬ್ಬ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ವಾರದಲ್ಲಿ ಕಡ್ಡಾಯವಾಗಿ ಎರಡು ದಿನ ಖಜಾನೆಗೆ (Treasury) ಭೇಟಿ ನೀಡಿ, ಕೂಲಿ ಹಣದ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಶೇಷ ಆಸಕ್ತಿ ವಹಿಸಬೇಕು. ಸಕಾಲದಲ್ಲಿ ವೇತನ ತಲುಪಿದರೆ ಮಾತ್ರ ಗ್ರಾಮೀಣ ಜನ ಕೆಲಸಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.

ಬೆಂಗಳೂರು ಸುತ್ತಮುತ್ತಲಿನ ಭಾಗಗಳಲ್ಲಿ ನಿಗದಿತ ₹382 ಕೂಲಿಗೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಧಿಕಾರಿಗಳ ಸಬೂಬನ್ನು ನಿರಾಕರಿಸಿದ ಸಚಿವರು, “ಗ್ರಾಮದ ಕೆರೆಯ ಹೂಳು ತೆಗೆದರೆ ನೀರಿನ ಸಂಗ್ರಹ ಹೆಚ್ಚುತ್ತದೆ, ಉತ್ತಮ ರಸ್ತೆ ನಿರ್ಮಾಣವಾಗುತ್ತದೆ ಮತ್ತು ಕೊಳವೆ ಬಾವಿಗಳ ಮರುಪೂರಣವಾಗಿ ಅಂತರ್ಜಲ ವೃದ್ಧಿಯಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಖಂಡಿತವಾಗಿ ಕೆಲಸಕ್ಕೆ ಬರುತ್ತಾರೆ” ಎಂದು ತಿಳಿಸಿದರು.

ಹಣವಿದ್ದರೂ ವಿಳಂಬ: ಜಿಪಂ ಸಿಇಒಗಳಿಗೆ ತರಾಟೆ:

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ವರ್ಷದ ನರೇಗಾ ಸಾಧನೆಗೆ ಹೋಲಿಸಿದರೆ ಪ್ರಸಕ್ತ ಯೋಜನೆಯಡಿ ಉದ್ಯೋಗ ಸೃಷ್ಟಿ ಪ್ರಮಾಣ ಶೇ. 80 ರಷ್ಟು ಭಾರಿ ಕುಸಿತ ಕಂಡಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒಟ್ಟು 120 ಗ್ರಾಮ ಪಂಚಾಯತಿಗಳಿದ್ದು, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ದಿನಕ್ಕೆ ಕನಿಷ್ಠ 50 ಜನರಿಗೆ ಕೆಲಸ ನೀಡಿದರೂ ದೈನಂದಿನ 6,000 ಜನರಿಗೆ ಆಸರೆಯಾಗಬಹುದು.

ಜಿಲ್ಲೆಗೆ ಈಗಾಗಲೇ ₹20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದರೂ, ಒಟ್ಟು ಪಾವತಿಯಾಗಬೇಕಿದ್ದ ₹1.86 ಕೋಟಿ ವೇತನದಲ್ಲಿ ಕೇವಲ ₹40 ಲಕ್ಷ ಮಾತ್ರ ವಿತರಣೆಯಾಗಿದೆ. ಇಲಾಖೆಯ ನಿಯಮಗಳ ಪ್ರಕಾರ ಬಡ ಕಾರ್ಮಿಕರ ವೇತನ ಪಾವತಿಯಲ್ಲಿ ಪಿಡಿಒಗಳ ಲಾಗಿನ್‌ನಲ್ಲೇ ಹಣ ಬಾಕಿ ಉಳಿದು ಅನಗತ್ಯ ವಿಳಂಬ ಧೋರಣೆ ಅನುಸರಿಸಿದರೆ ದಂಡ ವಿಧಿಸಲಾಗುವುದು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ವೈಯಕ್ತಿಕ ನಿಗಾ ವಹಿಸಿ ಬಾಕಿ ಇರುವ ₹1.46 ಕೋಟಿ ಕೂಲಿ ಹಣವನ್ನು ತಕ್ಷಣವೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕುಡಿಯುವ ನೀರು ಯೋಜನೆಗಳಿಗೆ ಅರಣ್ಯ ಇಲಾಖೆ ಅನುಮತಿ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗಾಗಿ ಕೆರೆ, ನದಿ ಮತ್ತು ಸರೋವರಗಳಿಂದ ಪೈಪ್‌ಲೈನ್ ಅಳವಡಿಸಲು ಅರಣ್ಯ ಇಲಾಖೆಯ ತಾಂತ್ರಿಕ ಅನುಮತಿ ಸಿಗದೆ ಕಾಮಗಾರಿಗಳು ವಿಳಂಬವಾಗಿರುವ ಕುರಿತು ಸಚಿವರು ಸಭೆಯಲ್ಲಿ ಚರ್ಚಿಸಿದರು. “ಈ ಬಗ್ಗೆ ಶೀಘ್ರದಲ್ಲೇ ಅರಣ್ಯ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗುವುದು. ಕೇಂದ್ರ ಸರ್ಕಾರದ ‘ಪರಿವೇಶ್’ (Parivesh) ಪೋರ್ಟಲ್‌ನಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸಿ, ನಿಯಮಾನುಸಾರ ತ್ವರಿತವಾಗಿ ಒಪ್ಪಿಗೆ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.

ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಹಾಜರಿದ್ದ ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಮಾತನಾಡಿ, ಮಾಗಡಿ ತಾಲೂಕಿನಲ್ಲಿ ‘ವಿಬಿಜಿ ರಾಮ್ ಜಿ’ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ತಾವೂ ಸಹ ಖುದ್ದಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಧಾರವಾಡ, ಚಿಕ್ಕಮಗಳೂರು, ಹಾಸನ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒಗಳು, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು (EO) ಭಾಗವಹಿಸಿದ್ದರು. ಇಲಾಖೆಯ ಪ್ರಮುಖರಾದ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ಡಿ. ರಂದೀಪ್ ಮತ್ತು ಆಯುಕ್ತರಾದ ಡಾ. ಅರುಂಧತಿ ಚಂದ್ರಶೇಖರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 


Share this with Friends

Related Post