Fri. Mar 6th, 2026

ಕರ್ನಾಟಕಕ್ಕೆ ಬರಲಿದೆ ‘ಫ್ಲೈ-ಟ್ಯಾಕ್ಸಿ’: ರಕ್ಷಣಾ ಮತ್ತು ವೈಮಾಂತರಿಕ್ಷ ಕ್ಷೇತ್ರದ ಹೊಸ ಹಬ್ ಆಗಿ ರಾಜ್ಯದ ಉದಯ

Share this with Friends

ಬೆಂಗಳೂರು: ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ಉದ್ಯಮಗಳ ಕ್ಷೇತ್ರದಲ್ಲಿ ಕರ್ನಾಟಕವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಸರ್ಕಾರ ಸಜ್ಜಾಗಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿ ‘ಫ್ಲೈ-ಟ್ಯಾಕ್ಸಿ’ (ಏರಿಯಲ್ ಟ್ಯಾಕ್ಸಿ) ಸೇವೆಗೆ ಅಗತ್ಯವಾದ ನೀತಿಯನ್ನು ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ನಾನಾ ಕೈಗಾರಿಕಾ ವಲಯಗಳ ಭವಿಷ್ಯದ ಹಾದಿ ಹೇಗಿರಬೇಕು ಮತ್ತು ಸರಕಾರವು ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಸ್ವರೂಪ ಯಾವುದಾಗಿರಬೇಕು ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಏರೋಸ್ಪೇಸ್ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಆಟೋ/ಇ.ವಿ, ಮತ್ತು ಪರಿಸರಸ್ನೇಹಿ ಇಂಧನ ವಲಯಗಳ ವಿಷನ್ ಗ್ರೂಪ್ ಗಳ ಮಹತ್ತ್ವದ ಸಭೆ ನಡೆಸಿದರು.

ಖನಿಜ ಭವನದಲ್ಲಿ ಇಡೀ ದಿನ ನಡೆದ ಸಭೆಗಳಲ್ಲಿ ಪ್ರಮುಖ್ಯ ಉದ್ಯಮಿಗಳು ಹಾಗೂ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಲವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಕೆಎಫ್ ಸಿಇಒ ಜೋತ್ಸ್ನಾ, ಉದ್ಯೋಗ ಮಿತ್ರ ಎಂಡಿ ದೊಡ್ಡ ಬಸವರಾಜು ಸೇರಿದಂತೆ ಇತರರು ಇದ್ದರು.

ಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಕಂಪನಿಗಳು ಸಾಧಿಸುತ್ತಿರುವ ಮೈಲಿಗಲ್ಲನ್ನು ಶ್ಲಾಘಿಸಿದರು. 2028ರ ವೇಳೆಗೆ ಜಪಾನ್‌ನಲ್ಲಿ ಸುಝುಕಿ ಮತ್ತು ಟೊಯೊಟಾ ಕಂಪನಿಗಳು ಆರಂಭಿಸಲಿರುವ ಏರಿಯಲ್ ಟ್ಯಾಕ್ಸಿಗಳಿಗೆ ಬೆಂಗಳೂರು ಮೂಲದ ‘ಸಾಸ್ಮೋಸ್’ ಕಂಪನಿಯೇ ವಿದ್ಯುತ್ ಉಪಕರಣಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಇದೇ ಮಾದರಿಯ ಸೇವೆಯನ್ನು ನಮ್ಮಲ್ಲೂ ಆರಂಭಿಸಲು ಉದ್ದಿಮೆದಾರರು ಆಸಕ್ತಿ ತೋರಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದರು.

ಮೂರು ಪ್ರಮುಖ ರಕ್ಷಣಾ ಕಾರಿಡಾರ್‌ಗಳು:

ರಾಜ್ಯದಲ್ಲಿ ರಕ್ಷಣಾ ಉತ್ಪಾದನೆಗೆ ವೇಗ ನೀಡಲು ಮೂರು ಪ್ರಮುಖ ಕಾರಿಡಾರ್‌ಗಳ ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಉತ್ತರ-ಕೋಲಾರ-ಚಿಕ್ಕಬಳ್ಳಾಪುರ.

ಧಾರವಾಡ-ವಿಜಯಪುರ-ಬೆಳಗಾವಿ.

ಬೆಂಗಳೂರು ಮತ್ತು ಮೈಸೂರು ನಡುವೆ ಹೊಸ ಕಾರಿಡಾರ್ ಅಭಿವೃದ್ಧಿ.

ಈ ಕಾರಿಡಾರ್‌ಗಳ ಮಂಜೂರಾತಿಗಾಗಿ ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿಶೇಷ ಪಾರ್ಕ್‌ಗಳ ಸ್ಥಾಪನೆ:

ಕರ್ನಾಟಕವನ್ನು ರಕ್ಷಣಾ ಎಲೆಕ್ಟ್ರಾನಿಕ್ ಉತ್ಪನ್ನಗಳ ರಾಜಧಾನಿಯನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 200 ಎಕರೆಯಲ್ಲಿ ಪ್ರತ್ಯೇಕ ಪಾರ್ಕ್ ಹಾಗೂ 100 ಎಕರೆಯಲ್ಲಿ ಏವಿಯಾನಿಕ್ಸ್ ಮತ್ತು ಸೆನ್ಸರ್ ಪಾರ್ಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ವಿಶೇಷ ಹೂಡಿಕೆ ವಲಯ ಅಸ್ತಿತ್ವಕ್ಕೆ ಬಂದ ಕೂಡಲೇ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ಅಗತ್ಯವಿರುವ ಭೂಮಿ ಲಭ್ಯವಿದ್ದು, ಯಾವುದೇ ಅಡೆತಡೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉದ್ಯಮಗಳ ಬೆಳವಣಿಗೆಗೆ ಅಗತ್ಯವಾದ ಪರೀಕ್ಷಾ ಕೇಂದ್ರ (Testing Centre) ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಉದ್ಯಮಿಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ರಾಜ್ಯದ ಕೈಗಾರಿಕಾ ಪ್ರಗತಿಗಾಗಿ ಸರ್ಕಾರವು ಹಮ್ಮಿಕೊಂಡಿರುವ ಕೆಲವು ಪ್ರಮುಖ ಯೋಜನೆಗಳು ಇಲ್ಲಿವೆ:

ಮಶೀನ್ ಟೂಲ್ಸ್ ಕ್ಷೇತ್ರ: ರಾಜ್ಯದಲ್ಲಿ ವಾರ್ಷಿಕ ₹36,500 ಕೋಟಿ ವಹಿವಾಟು ನಡೆಯುತ್ತಿದ್ದು, ಬೆಂಗಳೂರಿನಲ್ಲಿರುವಂತೆ ತುಮಕೂರಿನಲ್ಲಿ ಮತ್ತೊಂದು ಕಂಟ್ರೋಲ್ ಸಿಸ್ಟಂ ಪರೀಕ್ಷಾರ್ಥ ಘಟಕವನ್ನು ಸ್ಥಾಪಿಸಲಾಗುವುದು.

ಇವಿ (EV) ಮತ್ತು ಆಟೋ ವಲಯ: ಧಾರವಾಡದ ಟಾಟಾ ಘಟಕವು ಇವಿ ಬಸ್‌ಗಳ ನಂತರ ಈಗ ಮಿನಿ ಎಸ್ಕವೇಟರ್ ಉತ್ಪಾದನೆಗೆ ಸಜ್ಜಾಗುತ್ತಿದೆ. ರಫ್ತು ಉತ್ತೇಜನಕ್ಕೆ ‘ಡ್ರೈಪೋರ್ಟ್’ ಜಾಲ ಮತ್ತು ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ.

ಕೌಶಲ್ಯಾಭಿವೃದ್ಧಿ: ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ವೃತ್ತಿ ತರಬೇತಿ ಸಂಸ್ಥೆಗಳನ್ನು (ITI/Skill Centers) ತೆರೆಯುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಆಲೋಚನೆ ಇದೆ.

ಭವಿಷ್ಯದ ತಂತ್ರಜ್ಞಾನ: ಹಸಿರು ಇಂಧನಕ್ಕಾಗಿ ಬ್ಯಾಟರಿ ಸ್ಟೋರೇಜ್ ನೀತಿ ಮತ್ತು ಹೆಚ್ಚಿನ ಡೇಟಾ ಸೆಂಟರ್‌ಗಳ ಸ್ಥಾಪನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.


Share this with Friends

Related Post