ಕಲಬುರಗಿ: “ಜೀವನದಲ್ಲಿ ಯಶಸ್ಸಿನ ಹಾದಿ ಯಾವಾಗಲೂ ಸುಲಭವಲ್ಲ. ಸವಾಲುಗಳು ಎದುರಾಗುತ್ತವೆ, ಸಂದರ್ಭಗಳು ಬದಲಾಗುತ್ತವೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸ, ನೈತಿಕ ಮೌಲ್ಯಗಳು ಮತ್ತು ಕಠಿಣ ಪರಿಶ್ರಮದ ಮನೋಭಾವವಿದ್ದರೆ, ನೀವು ಪ್ರತಿಯೊಂದು ಅಡೆತಡೆಯನ್ನೂ ನಿವಾರಿಸಿ ಜೀವನದಲ್ಲಿ ಗೆಲ್ಲಬಹುದು ಎಂದು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ನೀವು ಪಡೆಯುವ ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಸಾಧಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ ಎಂಬುದು ನನ್ನ ದೃಢವಿಶ್ವಾಸ. ಜೀವನದ ಯಶಸ್ಸಿನಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಕಲಿತ ಶಿಕ್ಷಣ ವ್ಯರ್ಥವಾಗುವುದಿಲ್ಲ ಎಂದರು.
ದೇಶವು ತನ್ನ ನಾವೀನ್ಯತೆ, ಉದ್ಯಮಶೀಲತೆ, ಸಂಶೋಧನೆ ಮತ್ತು ಸಾಮಾಜಿಕ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ಯುವ ಸಮೂಹ ಕೊಡುಗೆ ನೀಡಬೇಕೆಂದು ನಿರೀಕ್ಷಿಸುತ್ತದೆ. ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಂವೇದನಾಶೀಲರಾಗಿರಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತರಾಗಿರಿ ಮತ್ತು ನಿಮ್ಮ ಜ್ಞಾನವನ್ನು ಮಾನವೀಯತೆಯ ಸೇವೆಯಲ್ಲಿ ಬಳಸುವ ಮೂಲಕ ರಾಜ್ಯದ ಮತ್ತು ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಣದ ಉದ್ದೇಶ ಕೇವಲ ಜ್ಞಾನ ಸಂಪಾದನೆಯಲ್ಲ, ಬದಲಾಗಿ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗಿದೆ. ಶಿಕ್ಷಣವು ನಮ್ಮಲ್ಲಿ ವಿವೇಕ, ಸೂಕ್ಷ್ಮತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ತುಂಬುತ್ತದೆ. ಇಂದಿನ ಯುಗದಲ್ಲಿ, ಕೌಶಲ್ಯ, ನಾವೀನ್ಯತೆ ಮತ್ತು ತಂತ್ರಜ್ಞಾನದ ತಿಳುವಳಿಕೆಯೊಂದಿಗೆ ಜ್ಞಾನವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದರು.
ಈ ದೇಶ ನಿಮಗೆ ಬಹಳಷ್ಟು ನೀಡಿದೆ, ಈಗ ದೇಶಕ್ಕಾಗಿ ಏನಾದರೂ ಮಾಡುವುದು ನಿಮ್ಮ ಕರ್ತವ್ಯ. ನೀವು ಗಳಿಸಿದ ಜ್ಞಾನದಿಂದ ನೀವು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮೂಲವಾಗುತ್ತೀರಿ ಮತ್ತು “ಸ್ವಾವಲಂಬಿ ಭಾರತ” ನಿರ್ಮಾಣದಲ್ಲಿ ಕೈಜೋಡಿಸುತ್ತೀರಿ ಎಂಬ ಆಶಾಭಾವನೆ ನನ್ನದಾಗಿದೆ ಎಂದರು.
ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ:
ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಸಾಮಾಜಿಕ ಸೇವೆ ಪರಿಗಣಿಸಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಸೇರಿದಂತೆ ಗಣ್ಯರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಾಧಕರ ಜೀವನ ಪರಿಚಯ ಸಹ ತಿಳಿಸಲಾಯಿತು.
77 ವಿದ್ಯಾರ್ಥಿಗಳಿಗೆ 172 ಚಿನ್ನದ ಪದಕ:
ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ 24 ಹಾಗೂ ವಿವಿಧ ಸ್ನಾತಕೋತ್ತರ ಕೋರ್ಸುಗಳಿಗೆ 148 ಸೇರಿ ಒಟ್ಟಾರೆ 172 ಚಿನ್ನದ ಪದಕಗಳನ್ನು 58 ಮಹಿಳಾ ವಿದ್ಯಾರ್ಥಿಗಳು ಹಾಗೂ 19 ಪುರುಷ ವಿದ್ಯಾರ್ಥಿಗಳು ಸೇರಿದಂತೆ 77 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇನ್ನುಳಿದಂತೆ 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ಮಹಿಳಾ ವಿದ್ಯಾರ್ಥಿಗಳು ಮತ್ತು 5 ಪುರುಷ ವಿದ್ಯಾರ್ಥಿಗಳು ಸೇರಿ 19 ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು.
19,133 ಅಭ್ಯರ್ಥಿಗಳಿಗೆ ಪದವಿ ಪ್ರದಾನ:
ಪದವಿ ಕೋರ್ಸಿನಲ್ಲಿ 15,504, ಸ್ನಾತಕೋತ್ತರ ಕೋರ್ಸ್ನಲ್ಲಿ 3,462, ಪಿ.ಜಿ. ಡಿಪ್ಲೊಮಾ ಕೋರ್ಸಿನಲ್ಲಿ 44 ಹಾಗೂ ಪಿ.ಎಚ್.ಡಿ. ಪದವಿ 123 ಸೇರಿದಂತೆ ಒಟ್ಟಾರೆ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ 19,133 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 10,463 ಪುರುಷ ಹಾಗೂ 8,670 ಮಹಿಳಾ ವಿದ್ಯಾರ್ಥಿಗಳು ಸೇರಿದ್ದಾರೆ.
ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗುಲಬರ್ಗಾ ವಿ.ವಿ. ಕಳೆದ 4 ದಶಕದಿಂದ ಪ್ರದೇಶದ ಉನ್ನತ ಶಿಕ್ಷಣ ವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಪಿ.ಎಚ್.ಡಿ. ಪದವಿಯ ಮೌಲ್ಯ ಕಾಪಾಡಲು ಪಡೆಯಲು ಕಳೆದ ಒಂದು ದಶಕದಿಂದ ಪ್ರವೇಶ ಪರೀಕ್ಷೆ ನಡೆಸಿ ಅರ್ಹರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರಸರಾಂಗದ ಮೂಲಕ ಪುಸ್ತಕ ಪ್ರಕಟಿಸಲಾಗುತ್ತಿದೆ. ಅಧ್ಯಯನ ಪೀಠಗಳು ಸಕ್ರಿಯವಾಗಿದ್ದು, ಇಲ್ಲಿನ ಡಿಜಿಟಲ್ ಗ್ರಂಥಾಲಯ ಏಷಿಯಾದಲ್ಲಿ ಪ್ರಮುಖ ಗ್ರಂಥಾಲಯದಲ್ಲಿ ಒಂದಾಗಿದೆ ಎಂದು ವಿ.ವಿ. ಕುರಿತು ಮಾತನಾಡಿದರು.
ಕುಲಸಚಿವ ಪ್ರೊ. ರಮೇಶ್ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ ಸೇರಿದಂತೆ ವಿದ್ಯಾ ವಿಷಯಕಕ್, ಸಿಂಡಿಕೇಟ್ ಸಮಿತಿ ಸದಸ್ಯರು, ವಿ.ವಿ. ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಪಾಲಕರು ಭಾಗವಹಿಸಿದ್ದರು.

