Sat. Jun 6th, 2026

ಸಧ್ಯಕ್ಕೆ ಮುನ್ನೆಚ್ಚರಿಕೆಯೊಂದೇ ಮಂಗನಕಾಯಿಲೆಗೆ ಇರುವ ಪರಿಹಾರ:ದಿನೇಶ್ ಗುಂಡೂರಾವ್

Share this with Friends

ಶಿವಮೊಗ್ಗ: ಮಂಗನಕಾಯಿಲೆ (ಕ್ಯಾಸನೂರು ಅರಣ್ಯ ಕಾಯಿಲೆ)ಗೆ ತಜ್ಞರು ಅಧಿಕೃತವಾಗಿ ಔಷಧಿಯನ್ನು ದೃಢೀಕರಿಸಿದ ಕೂಡಲೇ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಅಲ್ಲಿಯವರೆಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದೇ ಏಕೈಕ ದಾರಿಯಾಗಿದ್ದು, ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೇ ವೈದ್ಯರ ಬಳಿ ತೆರಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಶಿವಮೊಗ್ಗದ ಸರ್ಕ್ಯೂಟ್ ಹೌಸ್‌‌ನಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ, ಮಂಗನಕಾಯಿಲೆ (ಕ್ಯಾಸನೂರು ಅರಣ್ಯ ಕಾಯಿಲೆ) ನಿಯಂತ್ರಣದ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಈ ವೇಳೆ ಮಾತನಾಡಿದ ಸಚಿವರು,ಮಂಗನಕಾಯಿಲೆಗೆ ಸದ್ಯಕ್ಕೆ ನಿಗದಿತವಾದ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ಪರಿಣಾಮಕಾರಿ ಔಷಧಿಗಾಗಿ ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆ ನಡೆಯುತ್ತಿದೆ. ತಜ್ಞರು ಅಧಿಕೃತವಾಗಿ ಔಷಧಿಯನ್ನು ದೃಢೀಕರಿಸಿದ ಕೂಡಲೇ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಅಲ್ಲಿಯವರೆಗೂ ಮುನ್ನೆಚ್ಚರಿಕೆ ವಹಿಸುವುದೇ ಈ ಕಾಯಿಲೆಯಿಂದ ಪಾರಾಗಲು ಇರುವ ಏಕೈಕ ದಾರಿ ಎಂದರು.

​ವಿಶೇಷವಾಗಿ ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿಯಂತಹ ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಗಳ ಸಾರ್ವಜನಿಕರಲ್ಲಿ ಜ್ವರ ಅಥವಾ ತಲೆಭಾರದಂತಹ ಲಕ್ಷಣಗಳು ಕಂಡುಬಂದಲ್ಲಿ ಕಿಂಚಿತ್ತೂ ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಮಂಗನ ಕಾಯಿಲೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಕಾರ್ಯನಿರ್ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೂ ಸ್ಪಷ್ಟ ನಿರ್ದೇಶನ ನೀಡಿದ್ದೇನೆ.ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಂಗನಕಾಯಿಲೆ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದರು.

 


Share this with Friends

Related Post