ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟಕರಾದ ಕೊಪ್ಪಳದ ಶ್ರೀ ಗವಿಮಠದ ಪೀಠಾಧೀಪತಿಗಳಾದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ದಸರಾ ಪುಸ್ತಕ ಮೇಳಕ್ಕೆ ಭೇಟಿ ನೀಡಿ ಕೃತಿಗಳನ್ನು ವೀಕ್ಷಿಸಿದರು.
ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 20 ರವರೆಗೆ ಹಮ್ಮಿಕೊಳ್ಳಲಾಗಿರುವ ‘ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ’ದ ವಿವಿಧ ಮಳಿಗೆಗಳಿಗೆ ಶ್ರೀಗಳು ಭೇಟಿ ನೀಡಿದರು. ಪ್ರದರ್ಶನದಲ್ಲಿದ್ದ ನೂರಾರು ಕೃತಿಗಳನ್ನು ಅತ್ಯಂತ ಆಸಕ್ತಿಯಿಂದ ಪರಿಶೀಲಿಸಿದ ಅವರು, ಸಾಹಿತ್ಯದ ವಿವಿಧ ಪ್ರಕಾರಗಳ ಬರಹಗಳ ಮೇಲೆ ಕಣ್ಣಾಡಿಸಿದರು.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪುಸ್ತಕ ಮೇಳದ ಆವರಣದಲ್ಲಿ ಕಳೆದ ಸ್ವಾಮೀಜಿಯವರು, ತಮಗೆ ಇಷ್ಟವಾದ ಕೆಲವು ಅಪರೂಪದ ಪುಸ್ತಕಗಳು ಮತ್ತು ಅವುಗಳ ಲೇಖಕರ ಹೆಸರುಗಳನ್ನು ಸ್ವತಃ ತಮ್ಮ ವೈಯಕ್ತಿಕ ನೋಟ್ ಪುಸ್ತಕದಲ್ಲಿ ಬರೆದುಕೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮೇಳದಲ್ಲಿದ್ದ ವಿವಿಧ ಪ್ರಕಾಶಕರು ತಮ್ಮ ಪ್ರಕಾಶನ ಸಂಸ್ಥೆಗಳಿಂದ ಮುದ್ರಿತಗೊಂಡಿರುವ ವಿಶೇಷ ಕೃತಿಗಳನ್ನು ಶ್ರೀಗಳಿಗೆ ಗೌರವಪೂರ್ವಕವಾಗಿ ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಎಸ್. ನಿರ್ಮಲ ಮಠಾಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಸಾಹಿತ್ಯ ವಲಯದ ಪ್ರಮುಖರು ಉಪಸ್ಥಿತರಿದ್ದರು.

