Mon. Nov 16th, 2026

‘ವಿಕಸಿತ ಭಾರತ 2047’ ನಿರ್ಮಾಣಕ್ಕೆ ಯುವಜನತೆ ಸಂಕಲ್ಪ ತೊಡಬೇಕು: ಗವರ್ನರ್ ಡಾ. ಸುಧಾ ಯಾದವ್ ಕರೆ

Share this with Friends

ಬಳ್ಳಾರಿ: ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ 2047ರ ವೇಳೆಗೆ ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ರೂಪಿಸುವ ಮಹಾ ಸಂಕಲ್ಪದಲ್ಲಿ ಯುವ ಸಮುದಾಯ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯಪಾಲರಾದ ಡಾ. ಸುಧಾ ಯಾದವ್ ಕರೆ ನೀಡಿದ್ದಾರೆ.

ಸೋಮವಾರ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲೆ, ಸಾಹಿತ್ಯ ಮತ್ತು ಲೋಕಕಲ್ಯಾಣದ ಸ್ವರ್ಣಯುಗ ಸೃಷ್ಟಿಸಿದ ಸಾಮ್ರಾಟ್ ಕೃಷ್ಣದೇವರಾಯರ ಐತಿಹಾಸಿಕ ನೆಲದಲ್ಲಿರುವ ಈ ವಿಶ್ವವಿದ್ಯಾಲಯವು 2010ರಲ್ಲಿ ಸ್ಥಾಪನೆಯಾದಾಗಿನಿಂದ ಅತ್ಯಲ್ಪ ಅವಧಿಯಲ್ಲಿ ಉನ್ನತ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

ಸಾಮಾಜಿಕ ಕಳಕಳಿಯ ಶಿಕ್ಷಣ:

ರಾಜಭವನದ ಪ್ರಯತ್ನದಿಂದ ಕೆಕೆಆರ್‌ಡಿಬಿ ಮೂಲಕ ಬಿಡುಗಡೆಯಾದ 42 ಕೋಟಿ ರೂ. ಅನುದಾನದಲ್ಲಿ ವಿಶ್ವವಿದ್ಯಾಲಯದ ಡಿಜಿಟಲ್ ಮೂಲಸೌಕರ್ಯ ವಿಸ್ತರಣೆಯಾಗುತ್ತಿದೆ. ಗ್ರೀನ್ ಕ್ಯಾಂಪಸ್ ಹಾಗೂ ಕೃತಕ ಬುದ್ಧಿಮತ್ತೆಯಂತಹ (AI) ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ, ತೃತೀಯ ಲಿಂಗಿಗಳು ಹಾಗೂ ಸ್ವಚ್ಛತಾ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವ ಮೂಲಕ ವಿವಿಯು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಶಯವನ್ನು ಸಾಕಾರಗೊಳಿಸಿದೆ ಎಂದರು. ಪದವಿ ಪ್ರಮಾಣಪತ್ರವು ಕೇವಲ ಕಾಗದವಲ್ಲ, ಅದು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿದೆ ಎಂದು ಡಾ. ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಸ್ಮರಿಸಿದರು.

ಯುವಕರಿಗೆ ಪಂಚ ಸಂಕಲ್ಪಗಳ ಮಂತ್ರ:

ಯುವಜನತೆಗೆ ಐದು ಪ್ರಮುಖ ಸಂಕಲ್ಪಗಳನ್ನು ಬೋಧಿಸಿದ ರಾಜ್ಯಪಾಲರು, ಕೇವಲ ಉದ್ಯೋಗ ಅರಸುವವರಾಗದೆ ಸ್ಟಾರ್ಟ್‌ಅಪ್ ಹಾಗೂ ನಾವೀನ್ಯತೆಗಳ ಮೂಲಕ ಉದ್ಯೋಗದಾತರಾಗಿ ಬೆಳೆಯಬೇಕು ಎಂದರು. ವ್ಯಸನಗಳಿಂದ ದೂರವಿದ್ದು ನಶಾ ಮುಕ್ತ ಭಾರತದ ರಾಯಭಾರಿಗಳಾಗಬೇಕು, ಎಐ ಮತ್ತು ಡಿಜಿಟಲ್ ಯುಗದಲ್ಲಿ ನಿರಂತರ ಕಲಿಕೆಯ ಹಂಬಲ ಹೊಂದಿರಬೇಕು ಹಾಗೂ ‘ಒಂದು ಮರ – ತಾಯಿ’ ಎಂಬ ಭಾವನೆಯೊಂದಿಗೆ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಜೀವನಶೈಲಿಯನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ನಶಾ ಮುಕ್ತ ಭಾರತ ಪ್ರತಿಜ್ಞೆ’ ಬೋಧಿಸಿದರು.

ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್:

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಮೂವರು ಗಣ್ಯರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಶಿಕ್ಷಣ ಮತ್ತು ಸಮಾಜಸೇವೆಗಾಗಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಡಾ. ಹೆನ್ರಿ ಡಿಸೋಜಾ, ಸಾಹಿತ್ಯ, ಪರಿಸರ ಹಾಗೂ ಸಮಾಜಸೇವೆಗಾಗಿ ಚನ್ನಬಸವಣ್ಣ ಸಿ. (‘ಲೋಹಿಯಾ ಚನ್ನಬಸವಣ್ಣ’) ಮತ್ತು ಶಿಕ್ಷಣ, ಕಲೆ ಹಾಗೂ ಸಮಾಜಸೇವೆಗಾಗಿ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಹಸಂಸ್ಥಾಪಕಿ ಗೀತಾ ನಾಗಪಾಲ್ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು.

ವೇದಿಕೆಯಲ್ಲಿ ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್, ಕುಲಪತಿ ಪ್ರೊ. ಎಂ. ಮುನಿರಾಜು, ಕುಲಸಚಿವ ಪ್ರೊ. ವಿ. ಲೋಕೇಶ್, ಮೌಲ್ಯಮಾಪನ ಕುಲಸಚಿವ ಪ್ರೊ. ಪಿ. ಕಣ್ಣನ್ ಸೇರಿದಂತೆ ವಿವಿಯ ಡೀನರು, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share this with Friends

Related Post