ಬೆಂಗಳೂರು: ರಾಜ್ಯ ರಾಜಕಾರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ರೋಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಾದ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ್) ಅವರು ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ (ಸ್ಪೀಕರ್) ಆಗಸ್ಟ್ 14ರ ಶುಕ್ರವಾರದಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ನಡೆದ ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿ.ಎಸ್. ಪಾಟೀಲ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಪ್ರತಿಪಕ್ಷಗಳ ವತಿಯಿಂದ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ಜಿ.ಎಸ್. ಪಾಟೀಲ್ ಅವರು ಅವಿರೋಧವಾಗಿ ಸಭಾಧ್ಯಕ್ಷ ಪೀಠಕ್ಕೆ ಆಯ್ಕೆಯಾಗಿದ್ದಾರೆ ಎಂದು ಸದನದಲ್ಲಿ ಪ್ರಕಟಿಸಲಾಯಿತು.
ಗೌರವಪೂರ್ವಕವಾಗಿ ಆಸನಕ್ಕೆ ಕರೆತಂದ ನಾಯಕರು:
ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ಸಂಪ್ರದಾಯದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮತ್ತು ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಒಟ್ಟಾಗಿ ನೂತನ ಸಭಾಧ್ಯಕ್ಷರನ್ನು ಗೌರವಪೂರ್ವಕವಾಗಿ ಸ್ಪೀಕರ್ ಆಸನದ ಬಳಿಗೆ ಕರೆತಂದರು. ಈ ಸಂದರ್ಭದಲ್ಲಿ ಸದನದಲ್ಲಿದ್ದ ಎಲ್ಲಾ ಪಕ್ಷಗಳ ಶಾಸಕರು ಸಾಂಪ್ರದಾಯಿಕವಾಗಿ ಮೇಜು ಕುಟ್ಟುವ ಮೂಲಕ ನೂತನ ಸ್ಪೀಕರ್ ಅವರನ್ನು ಒಮ್ಮತದಿಂದ ಸ್ವಾಗತಿಸಿ, ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಸದನ ಮುನ್ನಡೆಸಲು ಸುದೀರ್ಘ ಅನುಭವದ ಬಲ:
ವಿಧಾನಸಭೆ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರ ಆಯ್ಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, “ಮೊದಲಿಗೆ ಟಿ ಬಿ ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು 1978ರಿಂದ ಶಾಸಕರಾಗಿದ್ದು, ಹಂಗಾಮಿ ಸಭಾಧ್ಯಕ್ಷರಾಗಿ ನಿಮ್ಮ ಆಯ್ಕೆಗೆ ನೆರವಾಗಿದ್ದಾರೆ. ಇನ್ನು ಖಾದರ್ ಅವರು ಮೂರು ವರ್ಷಗಳ ಅವಧಿಯಲ್ಲಿ ವಿಧಾನಸಭೆಗೆ ಹೊಸ ರೂಪ ನೀಡಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿವರೆಗೂ ಸದನ ನಡೆಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದಿಸುವೆ” ಎಂದು ಹೇಳಿದರು.
“ಸಭಾಧ್ಯಕ್ಷರೇ ನೀವು ಬಹಳ ವರ್ಷಗಳಿಂದ ನಮ್ಮ ಜೊತೆ ರಾಜಕಾರಣದಲ್ಲಿದ್ದೀರಿ. ನಿಮ್ಮ ಕುಟುಂಬವನ್ನು ನಾನು ಬಲ್ಲೆ, ನಿಮ್ಮದು ಬಹುದೊಡ್ಡ ಕೃಷಿ ಕುಟುಂಬ. ನಿಮ್ಮ ಸಹೋದರ ಆರ್ ಎಸ್ ಪಾಟೀಲ್ ಅವರು ಅಧ್ಯಕ್ಷರಾಗಿ, ಲೋಕಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮತ್ತೊಬ್ಬ ಸಹೋದರರು ಸಹಕಾರ ಕ್ಷೇತ್ರದಲ್ಲಿದ್ದಾರೆ. ಇನ್ನೊಬ್ಬ ಸಹೋದರರು ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದ್ದಾರೆ. ಬಿ.ಎಸ್ ಪಾಟೀಲ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ನಿಮ್ಮ ಕಿರಿಯ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ನಿಮ್ಮ ಇಡೀ ಕುಟುಂಬ ಹೀಗೆ ಸಮಾಜಕ್ಕೆ ಸೇವೆ ಸಲ್ಲಿಸಿದೆ. ನಮ್ಮ ಪಕ್ಷ ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಲಿಲ್ಲ, ಕೇವಲ ಅಭ್ಯರ್ಥಿಯನ್ನಾಗಿ ಘೋಷಿಸಿತು. ಆ ಸ್ಥಾನಕ್ಕೆ ಅಗೌರವ ನೀಡುವುದು ನಮ್ಮ ಚಿಂತನೆಯಲ್ಲ. ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ತಗಾದೆ ಹುಡುಕಿದ್ದಾರೆ. ವಿರೋಧ ಪಕ್ಷದವರು ನಿಮ್ಮ ಆಯ್ಕೆ ವೇಳೆ ಬರದೇ ಇರುವುದು ಅವರ ರಾಜಕೀಯ ನಿಲುವು. ಆದರೂ ಈ ಮೂಲಕ ನಿಮ್ಮ ಆಯ್ಕೆಗೆ ಸಹಕರಿಸಿದ್ದಾರೆ. ಅವರ ಪರವಾಗಿಯೂ ನಿಮಗೆ ಅಭಿನಂದನೆ ಸಲ್ಲಿಸುವೆ” ಎಂದು ತಿಳಿಸಿದರು.
“1989ರಿಂದ 8 ಬಾರಿ ನೀವು ಸ್ಪರ್ಧೆ ಮಾಡಿದ್ದೀರಿ. ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಇಂಧನ ಅಭಿವೃದ್ಧಿ, ಖನಿಜ ನಿಗಮದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೀರಿ. ನಿಮ್ಮ ಹಾಗೂ ಹೆಚ್ ಕೆ ಪಾಟೀಲ್ ಅವರ ಕ್ಷೇತ್ರದ ಭೇಟಿಯ ಸಂದರ್ಭದಲ್ಲಿ, ಅಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗಮನಿಸಿದೆ. ನಿಜಕ್ಕೂ ಮಾದರಿಯಾಗಿದೆ. ನಾನು ನಮ್ಮ ಕಾರ್ಯಕರ್ತರನ್ನು ಕಳುಹಿಸಿ ವೀಕ್ಷಣೆ ಮಾಡಿಸಿ, ನಮ್ಮ ಕ್ಷೇತ್ರಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಯಿತು. ಪಾಟೀಲ್ ಅವರು ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ವೀರಶೈವ ಸಮಾಜದ ವಿಚಾರದಲ್ಲಿ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯ ಬಂದಾಗ, ನಾನು ಅವರ ಕ್ಷೇತ್ರಕ್ಕೆ ಹೋಗಿ ರಂಭಾಪುರಿ ಶ್ರೀಗಳ ಬಳಿ ಕ್ಷಮೆ ಕೋರಿದ್ದೇನೆ. ಈ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಪುಟ್ಟರಾಜ ಗವಾಯಿ ಅವರ ಅಂಧರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ಶಿಸ್ತಿನ ಬದುಕಿನ ಕುಟುಂಬ. ನಿಮಗೆ ಭಗವಂತ ಒಳ್ಳೆಯದು ಮಾಡಲಿ. ನೀವು ಆ ಸ್ಥಾನದಲ್ಲಿ ಕುಳಿತು ನ್ಯಾಯವನ್ನು ನೀಡಿ. ನೀವು ಕೇವಲ ನಮ್ಮನ್ನು ಮಾತ್ರವಲ್ಲ, ವಿರೋಧ ಪಕ್ಷದವರ ಧ್ವನಿ ಆಲಿಸಿ. ನೀವು ಎತ್ತರದ ಸ್ಥಾನದಲ್ಲಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು 224 ಶಾಸಕರ ಪರವಾಗಿ ಶುಭ ಹಾರೈಸುತ್ತೇನೆ” ಎಂದು ತಿಳಿಸಿದರು.

