Tue. Aug 18th, 2026

ಹನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಜ್ಞಾತ ಸ್ಥಳದಿಂದ ವಿಡಿಯೋ ಬಾಂಬ್ ಸಿಡಿಸಿದ ಬದುಕುಳಿದ ನಾಲ್ಕನೇ ವ್ಯಕ್ತಿ ಮಹಿಮದಾಸ್!

Share this with Friends

ಚಾಮರಾಜನಗರ:ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಹನೂರು ಅರಣ್ಯ ವ್ಯಾಪ್ತಿಯ ಶೂಟೌಟ್ ಪ್ರಕರಣಕ್ಕೆ ಇದೀಗ ಅತ್ಯಂತ ರೋಮಾಂಚನಕಾರಿ ತಿರುವು ಸಿಕ್ಕಿದೆ. ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯ ವೇಳೆ ಸ್ಥಳದಲ್ಲಿದ್ದರೂ ಅದೃಷ್ಟವಶಾತ್ ಬದುಕುಳಿದಿದ್ದ ನಾಲ್ಕನೇ ವ್ಯಕ್ತಿ ಮಹಿಮದಾಸ್, ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾನೆ.

ಮೂವರ ಬಲಿ ಪಡೆದ ಆ ಭೀಕರ ಘಟನೆಯ ದಿನ ತಾನು ಅಲ್ಲಿಂದ ಹೇಗೆ ಪಾರಾದೆ ಹಾಗೂ ಪ್ರಸ್ತುತ ತನಗಿರುವ ಜೀವಭಯದ ಕುರಿತು ಆತ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಪೊಲೀಸ್ ವಿಚಾರಣೆಗೆ ಬರಲು ತೀವ್ರ ಭೀತಿ:

ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ತಕ್ಷಣವೇ ಅಲ್ಲಿಂದ ಓಡಿ ತಲೆಮರೆಸಿಕೊಂಡು ಆಸ್ಪತ್ರೆ ಸೇರಿದ್ದಾಗಿ ಮಹಿಮದಾಸ್ ತಿಳಿಸಿದ್ದಾನೆ. “ಪ್ರಸ್ತುತ ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ನನ್ನನ್ನು ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ಸೂಚಿಸುತ್ತಿದ್ದಾರೆ. ಆದರೆ, ನನಗೆ ಸದ್ಯದ ಪರಿಸ್ಥಿತಿಯಲ್ಲಿ ಹೊರಗೆ ಬರಲು ತೀವ್ರ ಆತಂಕವಾಗುತ್ತಿದೆ. ಪೊಲೀಸರೆಂದರೆ ನನಗೆ ಮೊದಲೇ ಭೀತಿ ಇರುವುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದೇನೆ” ಎಂದು ಅಜ್ಞಾತ ಸ್ಥಳದಲ್ಲಿ ಕುಳಿತು ತನ್ನ ಅಳಲು ತೋಡಿಕೊಂಡಿದ್ದಾನೆ.

ರಹಸ್ಯ ಸೀಳುತಿರುವ ತನಿಖಾ ಹಾದಿ:

ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಮೂವರು ಬಲಿಯಾದ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಮದಾಸ್ ಹೇಳಿಕೆಗಳು ಇಡೀ ಪ್ರಕರಣಕ್ಕೆ ಅತ್ಯಂತ ನಿರ್ಣಾಯಕವಾಗಿವೆ. ಅವತ್ತು ಅರಣ್ಯದೊಳಗೆ ವಾಸ್ತವವಾಗಿ ನಡೆದಿದ್ದೇನು? ಶೂಟೌಟ್‌ಗೆ ನಿಖರ ಕಾರಣವೇನು? ಎಂಬ ಸತ್ಯಾಂಶಗಳು ಈತನ ವಿಚಾರಣೆಯಿಂದಷ್ಟೇ ಹೊರಬರಬೇಕಿದೆ. ಆದರೆ, ಆತನೇ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ತನಿಖಾ ಸಂಸ್ಥೆಗಳಿಗೆ ಸವಾಲು ಹಾಕಿರುವುದು ಪೊಲೀಸರ ನಿದ್ದೆ ಗೆಡಿಸಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸರು, ಮಹಿಮದಾಸ್ ಇರುವ ರಹಸ್ಯ ಸ್ಥಳವನ್ನು ಪತ್ತೆಹಚ್ಚಲು ಜಾಲ ಬೀಸಿದ್ದಾರೆ.


Share this with Friends

Related Post