Tue. Oct 27th, 2026

ಹಾಸನಾಂಬೆ ದರ್ಶನಕ್ಕೆ 10 ಲಕ್ಷ ಹೆಚ್ಚುವರಿ ಭಕ್ತರ ನಿರೀಕ್ಷೆ: ಈ ಬಾರಿ ಎಲ್ಲರಿಗೂ ದೊನ್ನೆ ಪ್ರಸಾದ, ಸಚಿವ ಕೆ.ಎಂ. ಶಿವಲಿಂಗೇಗೌಡ

Share this with Friends

ಹಾಸನ: ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ಕೇವಲ ಒಂದು ಜಿಲ್ಲೆಗೆ ಸೀಮಿತವಾಗುಳಿಯದೆ, ಇಡೀ ನಾಡದೇವತೆಯಾಗಿ ಹೊರಹೊಮ್ಮಿದ್ದಾಳೆ. ಹೀಗಾಗಿ ಹಾಸನಾಂಬೆ ಉತ್ಸವವು ನಾಡಹಬ್ಬವಾಗಿ ಮಾರ್ಪಟ್ಟಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ಹಾಸನಾಂಬೆ ಉತ್ಸವದ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಿ ಸಂಖ್ಯೆಯಲ್ಲಿ ಆಗಮಿಸಲಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ವಿಸ್ತೃತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ನಾಳೆ ಸಂಜೆಯೊಳಗೆ ಎಲ್ಲಾ ಪೂರ್ವಸಿದ್ಧತಾ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಅತ್ಯಂತ ಸುವ್ಯವಸ್ಥಿತವಾಗಿ ಉತ್ಸವವನ್ನು ಆಯೋಜಿಸಲಾಗುವುದು ಎಂದರು.

ಇಸ್ಕಾನ್ ಲಾಡು ಮತ್ತು ದೊನ್ನೆ ಪ್ರಸಾದ ವಿತರಣೆ:

ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರಿಗೂ ಈ ಬಾರಿ ಪೂರ್ಣ ಪ್ರಮಾಣದ ದೊನ್ನೆ ಪ್ರಸಾದವನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಭಕ್ತಾದಿಗಳಿಗೆ ವಿತರಿಸಲು ಇಸ್ಕಾನ್ ಸಂಸ್ಥೆಯ ಮೂಲಕ ವಿಶೇಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಗ್ರಾಮೀಣ ವೈಭವ, ಕ್ರೀಡೆ ಮತ್ತು ಕುಸ್ತಿ ಹಬ್ಬ:

ದರ್ಶನಕ್ಕೆ ಬರುವ ಸಾರ್ವಜನಿಕರ ಮನರಂಜನೆಗಾಗಿ ಮೈಸೂರು ದಸರಾ ಮಾದರಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಬಡ್ಡಿ, ವಾಲಿಬಾಲ್ ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸುಮಾರು 400 ಮಂದಿ ಕುಸ್ತಿಪಟುಗಳು ಭಾಗವಹಿಸುವ ಬೃಹತ್ ಕುಸ್ತಿ ಪಂದ್ಯಾವಳಿಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

ಇದರೊಂದಿಗೆ ಹಳ್ಳಿಕಾರ್ ಸೇರಿದಂತೆ ವಿವಿಧ ಗೋತಳಿಗಳ ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ಟಗರು ಕಾಳಗದಂತಹ ಸಾಂಪ್ರದಾಯಿಕ ಮತ್ತು ಗ್ರಾಮೀಣ ವೈಭವವನ್ನು ಬಿಂಬಿಸುವ ಕಾರ್ಯಕ್ರಮಗಳು ಈ ಬಾರಿಯ ಉತ್ಸವದ ಮೆರುಗನ್ನು ಹೆಚ್ಚಿಸಲಿವೆ ಎಂದು ಸಚಿವ ಶಿವಲಿಂಗೇಗೌಡ ವಿವರಿಸಿದರು.

 

 


Share this with Friends

Related Post