ಮೈಸೂರು: “ಜನತಾದಳ 58 ಸೀಟು ಗೆದ್ದಿದ್ದು ನನ್ನಿಂದಲೇ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಅಂದು ಪಕ್ಷ ಗೆಲ್ಲಲು ದೇವೇಗೌಡರ ಮತ್ತು ನನ್ನ ಶ್ರಮವೇ ದೊಡ್ಡದು. ಸಿದ್ದರಾಮಯ್ಯ ಅವರ ಪಾತ್ರ ಕೇವಲ ಶೇ. 10ರಷ್ಟು ಮಾತ್ರ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಹಳೆಯ ರಾಜಕೀಯ ದಿನಗಳನ್ನು ನೆನಪಿಸುವ ಮೂಲಕ ತೀವ್ರ ವಾಗ್ದಾಳಿ ನಡೆಸಿದರು.
‘ಬಕೆಟ್ ತುಂಬುವಷ್ಟು ಕಣ್ಣೀರು ಹಾಕಿದ್ದರು’
1999ರ ಚುನಾವಣೆಯ ಸೋಲನ್ನು ಸ್ಮರಿಸಿದ ಕುಮಾರಸ್ವಾಮಿ, “ಅಂದು ಸಿದ್ದರಾಮಯ್ಯ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ಎಷ್ಟು ಸೀಟು ಗೆದ್ದಿದ್ದರು? ಸೋಲಿನ ನಂತರ ಮಹಾದೇವಪ್ಪ ಮತ್ತು ಸಿದ್ದರಾಮಯ್ಯ ಇಬ್ಬರೂ ಹೆಚ್.ಡಿ. ದೇವೇಗೌಡರ ಮನೆಗೆ ಬಂದು ಕಣ್ಣೀರು ಹಾಕಿದ್ದರು. ಅಂದು ಅವರು ಹಾಕಿದ ಕಣ್ಣೀರಿಗೆ ದೇವೇಗೌಡರ ಮುಂದೆ ಬಕೆಟ್ ಇಟ್ಟಿದ್ದರೆ ಅದು ತುಂಬಿ ಹೋಗುತ್ತಿತ್ತು. ಇಷ್ಟೆಲ್ಲಾ ಅನುಭವಿಸಿ ಈಗ ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಧೈರ್ಯ ತುಂಬಿದ್ದು ದೇವೇಗೌಡರು
“ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. 1999ರಲ್ಲಿ ದೇವೇಗೌಡರು, ನಾನು, ರೇವಣ್ಣ ಸೇರಿದಂತೆ ಎಲ್ಲರೂ ಸೋತಿದ್ದೆವು. ಆದರೆ ನಾವ್ಯಾರೂ ರಾಜಕೀಯ ಬೇಡ ಎಂದು ಕಣ್ಣೀರು ಹಾಕಿರಲಿಲ್ಲ. ಸಿದ್ದರಾಮಯ್ಯ ಕಣ್ಣೀರು ಹಾಕಿದಾಗ ‘ಹೆದರಬೇಡಿ, ಪಕ್ಷ ಕಟ್ಟೋಣ ನಡೆಯಿರಿ, ನಾನಿದ್ದೇನೆ’ ಎಂದು ಧೈರ್ಯ ತುಂಬಿದ್ದೇ ದೇವೇಗೌಡರು. ಈ ಹಳೆಯ ವಿಚಾರಗಳನ್ನು ಸಿದ್ದರಾಮಯ್ಯ ಒಮ್ಮೆ ನೆನಪು ಮಾಡಿಕೊಂಡರೆ ಒಳ್ಳೆಯದು” ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಕುಟುಂಬ ರಾಜಕಾರಣಕ್ಕೆ ತಿರುಗೇಟು
ಇದೇ ವೇಳೆ ಕುಟುಂಬ ರಾಜಕಾರಣದ ಟೀಕೆಗೂ ಉತ್ತರಿಸಿದ ಅವರು, “ತಮ್ಮ ಮಗನನ್ನು ರಾಜಕೀಯಕ್ಕೆ ತಂದು ವಸೂಲಿಗೆ ಬಿಟ್ಟಿರುವ ನಿಮಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ತಾಕತ್ತಿದ್ದರೆ ಕಾಂಗ್ರೆಸ್ ಬಿಟ್ಟು ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಿ” ಎಂದು ಸವಾಲು ಹಾಕಿದರು.
“ಸಿದ್ದರಾಮಯ್ಯ ಸಿಎಂ ಆಗಿರುವುದಕ್ಕೆ ಅವರ ಪಕ್ಷದವರಿಗೇ ಹೊಟ್ಟೆಕಿಚ್ಚು;
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವುದಕ್ಕೆ ನಮಗೇನು ಹೊಟ್ಟೆನೋವಿಲ್ಲ, ಬದಲಿಗೆ ಕಾಂಗ್ರೆಸ್ ಪಕ್ಷದ ಒಳಗಿರುವವರಿಗೇ ಅವರ ಮೇಲೆ ವಿಪರೀತ ಹೊಟ್ಟೆಕಿಚ್ಚಿದೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ರಾಜ್ಯ ರಾಜಕಾರಣದ ಸದ್ಯದ ಬೆಳವಣಿಗೆಗಳು ಹಾಗೂ ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸದ ಬಗ್ಗೆ ಹರಿಹಾಯ್ದರು.
ಸಮಯಕ್ಕಾಗಿ ಕಾಯುತ್ತಿರುವ ಕಾಂಗ್ರೆಸ್ ನಾಯಕರು:
ಸಿದ್ದರಾಮಯ್ಯ ಅವರ ಪೂರ್ಣಾವಧಿ ಸಿಎಂ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಅವರು ಸಿಎಂ ಆಗಿರುವುದು ಅವರ ಪಕ್ಷದ ಅನೇಕರಿಗೆ ನುಂಗಲಾರದ ತುತ್ತಾಗಿದೆ. ಕೆಲವರು ದಿನ ಬೆಳಗಾದರೆ ಸಮಯ ಯಾವಾಗ ಬರುತ್ತೆ ಎಂದು ಟೈಮ್ ನೋಡಿಕೊಂಡು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಹೆದರಿಸಿ ಇಟ್ಟುಕೊಂಡಿದ್ದಾರೆ, ಆದ್ದರಿಂದಲೇ ಅವರು ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟುಕೊಡುವುದಿಲ್ಲ” ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಬಿಟ್ಟು 5 ಸೀಟು ಗೆದ್ದು ತೋರಿಸಿ:
“ಅಹಿಂದ ನಾಯಕ ಎಂದು ಬೀಗುವ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ಹಂಗಿಲ್ಲದೆ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ” ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಸಿಎಂ ಪುತ್ರನ ವಿರುದ್ಧ ‘ವಸೂಲಿ’ ಆರೋಪ ಮಾಡುವ ಮೂಲಕ ಕುಟುಂಬ ರಾಜಕಾರಣದ ಟೀಕೆಗೆ ಕಠಿಣ ತಿರುಗೇಟು ನೀಡಿದರು.
ಕುಟುಂಬ ರಾಜಕಾರಣದ ನೈತಿಕತೆ ಎಲ್ಲಿದೆ?
“ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಆ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಅಥವಾ ನೈತಿಕತೆ ಇದೆ? ತಮ್ಮ ಮಗನನ್ನು ರಾಜಕೀಯಕ್ಕೆ ತಂದಿರುವ ಇವರು ಈಗ ಇತರರನ್ನು ಟೀಕಿಸುತ್ತಿರುವುದು ‘ಭೂತದ ಬಾಯಲ್ಲಿ ಭಗವದ್ಗೀತೆ’ ಬಂದಂತಿದೆ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನೇರ ಸವಾಲು:
ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿಯನ್ನು ಪ್ರಶ್ನಿಸಿದ ಕುಮಾರಸ್ವಾಮಿ, “ನೀವು ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತೀರಿ. ಕಾಂಗ್ರೆಸ್ ಪಕ್ಷದ ಹಂಗಿಲ್ಲದೆ, ಸ್ವಂತವಾಗಿ ಒಂದು ಪಕ್ಷ ಕಟ್ಟಿ ಕನಿಷ್ಠ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ತೋರಿಸುವ ತಾಕತ್ತು ನಿಮಗಿದೆಯೇ? ಮೊದಲು ಈ ಸವಾಲನ್ನು ಸ್ವೀಕರಿಸಿ” ಎಂದು ಸವಾಲು ಎಸೆದರು.
ಮಗನ ವಿರುದ್ಧ ವಸೂಲಿ ಆರೋಪ:
ಸಿಎಂ ಪುತ್ರನ ವಿರುದ್ಧ ಗಂಭೀರ ಆರೋಪ ಮಾಡಿದ ಕೇಂದ್ರ ಸಚಿವರು, “ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಆಶ್ರಯ ಸಮಿತಿಯ ಸದಸ್ಯತ್ವ ನೀಡಿ ಜಿಲ್ಲೆಗಳ ಉಸ್ತುವಾರಿ ನೀಡಿದ್ದೇ ವಸೂಲಿ ಮಾಡಲು. ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಗನಿಗೆ ಅಂತಹ ಯಾವುದೇ ಜವಾಬ್ದಾರಿ ನೀಡಿ ವಸೂಲಿಗೆ ಕಳುಹಿಸಿರಲಿಲ್ಲ. ಆದರೆ ಈಗ ಇವರ ಮಗ ಎಲ್ಲೆಡೆ ವಸೂಲಿಯಲ್ಲಿ ತೊಡಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಮೊದಲ ಮಗನ ನಿಧನದ ನಂತರ ಎರಡನೇ ಮಗನನ್ನು ರಾಜಕೀಯಕ್ಕೆ ತಂದಿದ್ದೇ ಹಣ ಮಾಡಲು ಎಂಬಂತೆ ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

