Fri. Jun 26th, 2026

ಭೈರಮಂಗಲದಲ್ಲಿ ಸಿಎಂ ಭೇಟಿಗೆ ಸಿದ್ಧ: ಬಹಿರಂಗ ಚರ್ಚೆಗೆ ಹೆಚ್.ಡಿ. ಕುಮಾರಸ್ವಾಮಿ ಸವಾಲು

Share this with Friends

ಬೆಂಗಳೂರು: ಬಿಡದಿ ಉಪನಗರ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಹಿತರಕ್ಷಣೆಗಾಗಿ ಜೂನ್ 27ರ ಶನಿವಾರದಂದು ಬಿಡದಿಯ ಭೈರಮಂಗಲದಲ್ಲಿ ತಾವು ಮುಖ್ಯಮಂತ್ರಿಗಳಿಗಾಗಿ ಕಾಯುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿದರೆ ರೈತರ ಸಮಸ್ಯೆಗಳ ಕುರಿತು ಮುಖಾಮುಖಿ ಚರ್ಚೆ ನಡೆಸಲು ಸಿದ್ಧ ಎಂದಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.”ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಬರುವಂತೆ ಪತ್ರ ಬರೆದಿದ್ದರು. ಆದರೆ, ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಹೆಚ್ಚು ಸೂಕ್ತ ಎಂದು ನಾನು ಮರುಪತ್ರ ಬರೆದಿದ್ದೇನೆ. ಶನಿವಾರ ಮಧ್ಯಾಹ್ನದವರೆಗೂ ನಾನು ಭೈರಮಂಗಲದಲ್ಲಿ ಸಿಎಂ ಅವರಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ,” ಎಂದು ಕುಮಾರಸ್ವಾಮಿ ಹೇಳಿದರು.

ಬಲವಂತದ ಭೂಸ್ವಾಧೀನಕ್ಕೆ ವಿರೋಧ

ರೈತರ ಪ್ರತಿಭಟನೆಗೆ ಕೇವಲ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದ ಸಚಿವರು, “ಕೆಲವರು ಭೂಮಿ ಕೊಡಲು ಸಿದ್ಧರಾಗಿದ್ದಾರೆ ಎಂಬುದು ಗೊತ್ತು. ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದರೆ ನನ್ನದೇನೂ ತಕರಾರಿಲ್ಲ. ಆದರೆ, ರೈತರನ್ನು ಬಲವಂತವಾಗಿ ಬೆದರಿಸಿ ಭೂಮಿ ಕಸಿದುಕೊಳ್ಳಲು ಯತ್ನಿಸಿದರೆ ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಿಲುವಿಗೆ ಆಕ್ಷೇಪ

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ನೆನಪಿಸಿಕೊಂಡ ಹೆಚ್‌ಡಿಕೆ, “ಹಿಂದೆ ಇದೇ ಬಿಡದಿ ಯೋಜನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿ ಸಭೆ ನಡೆಸಿದ್ದೆ. ಅಂದು ಇದೇ ಕಾಂಗ್ರೆಸ್ ನಾಯಕರು ಬಿಡದಿ ಉಪನಗರ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಂದು ರೈತರು ಬೇಡ ಎಂದಾಗ ವಿರೋಧಿಸಿದ್ದ ಕಾಂಗ್ರೆಸ್ ನಾಯಕರಿಗೆ, ಇಂದು ರೈತರು ಬೇಡವೆಂದರೂ ಯೋಜನೆ ಏಕೆ ಬೇಕಾಗಿದೆ?” ಎಂದು ಪ್ರಶ್ನಿಸಿದರು.

ಶಾಂತಿಯುತ ಹೋರಾಟಕ್ಕೆ ಸೆಕ್ಷನ್ 144 ಭೀತಿ: ಸರ್ಕಾರದ ವಿರುದ್ಧ ಹೆಚ್‌ಡಿಕೆ ಆಕ್ರೋಶ

ಕಾನೂನು ಚೌಕಟ್ಟಿನಲ್ಲೇ ರೈತರ ಹೋರಾಟ

ಭೈರಮಂಗಲದಲ್ಲಿ ರೈತರ ಪರ ಧ್ವನಿ ಎತ್ತಲು ತಾವು ಭೇಟಿ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ ಕೇಂದ್ರ ಸಚಿವರು, “ನೊಂದ ರೈತರು ಯಾವುದೇ ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿಲ್ಲ. ನಾನು ಕೂಡ ಅವರೊಂದಿಗೆ ನಿಂತು ನಿಯಮಾನುಸಾರವೇ ಹೋರಾಟ ಮುಂದುವರಿಸಲಿದ್ದೇನೆ” ಎಂದರು. ಅಲ್ಲದೆ, ಶನಿವಾರ ಮಧ್ಯಾಹ್ನದವರೆಗೂ ಸ್ಥಳದಲ್ಲೇ ಇದ್ದು ರೈತರ ಅಹವಾಲುಗಳನ್ನು ಆಲಿಸುವುದಾಗಿ ತಿಳಿಸಿದರು.

ಸರ್ಕಾರದ ದಬ್ಬಾಳಿಕೆಗೆ ತೀವ್ರ ಆಕ್ಷೇಪ

ಸುಗಮ ಚರ್ಚೆಗೆ ಮುಖ್ಯಮಂತ್ರಿಗಳು ಬರಬೇಕೆಂದು ಕೋರಿದ ಸಚಿವರು, ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದರು. “ನಾವು ಭೈರಮಂಗಲದಲ್ಲಿ ಯಾವುದೇ ಗಲಾಟೆ ಮಾಡಲು ಹೋಗುತ್ತಿಲ್ಲ. ಆದರೆ ಸರ್ಕಾರ ಅಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಲು ಮುಂದಾಗಿದೆ. ಬಹುಸಂಖ್ಯಾತ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಅವರ ಬಳಿ ಎಲ್ಲಾ ಪೂರಕ ದಾಖಲೆಗಳಿವೆ. ಹೀಗಿದ್ದೂ ಸರ್ಕಾರ ದಬ್ಬಾಳಿಕೆ ಅಥವಾ ಗದಪ್ರಹಾರ ನಡೆಸಲು ಹೊರಟಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.

ಎಚ್‌ಎಂಟಿ ವಾಚ್ ತೋರಿಸಿದ ಸಚಿವರು

ತಮ್ಮ ಬಳಿ ಅತ್ಯಂತ ದುಬಾರಿ ಮೌಲ್ಯದ ವಾಚ್ ಇದೆ ಎಂಬ ಶಾಸಕರೊಬ್ಬರ ಆರೋಪಕ್ಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳ ಮುಂದೆ ತಾವು ಧರಿಸಿದ್ದ ವಾಚ್ ಅನ್ನು ಪ್ರದರ್ಶಿಸಿದ ಅವರು, “ಯಾರೋ ಒಬ್ಬರು ನನ್ನ ಬಳಿ ದುಬಾರಿ ವಾಚ್ ಇದೆ ಎಂದು ವದಂತಿ ಹಬ್ಬಿಸಿದ್ದಾರೆ. ಆದರೆ ನಾನು ಕಟ್ಟಿರುವುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರವಿರುವ ಎಚ್‌ಎಂಟಿ (HMT) ಸಂಸ್ಥೆಯ ಸಾಮಾನ್ಯ ಗಡಿಯಾರ” ಎಂದು ಸ್ಪಷ್ಟನೆ ನೀಡಿದರು.

ಮನೆಗೆ ಎಸ್‌ಐಟಿ ಕಳಿಸಲಿ ಎಂದು ಸವಾಲು

ರಾಜ್ಯ ಸರ್ಕಾರದ ತನಿಖಾ ವೈಖರಿಯನ್ನು ಲೇವಡಿ ಮಾಡಿದ ಕುಮಾರಸ್ವಾಮಿ, “ಈ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದು ಸಣ್ಣ ವಿಷಯಕ್ಕೂ ಎಸ್‌ಐಟಿ (SIT) ರಚನೆ ಮಾಡಲಾಗುತ್ತಿದೆ. ವಾಚ್ ವಿಷಯದಲ್ಲೂ ಅನುಮಾನವಿದ್ದರೆ, ಬೇಕಿದ್ದರೆ ನಮ್ಮ ಮನೆಗೆ ಎಸ್‌ಐಟಿ ತಂಡವನ್ನು ಕಳುಹಿಸಿ ತನಿಖೆ ಮಾಡಿಸಲಿ” ಎಂದು ಮುಕ್ತ ಸವಾಲು ಹಾಕಿದರು.

 


Share this with Friends

Related Post