ಬೆಂಗಳೂರು: “ನದಿ ಜೋಡಣೆ ಯೋಜನೆಗೆ ನನ್ನ ಯಾವುದೇ ವಿರೋಧವಿಲ್ಲ. ಆದರೆ, ಗೋದಾವರಿ-ಕಾವೇರಿ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಸಿಗಲಿರುವ ನಿಖರವಾದ ನೀರಿನ ಪಾಲಿನ ಬಗ್ಗೆ ಮುಖ್ಯಮಂತ್ರಿಗಳಿಗೆ ಕನಿಷ್ಠ ಮಾಹಿತಿಯೂ ಇಲ್ಲ” ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜಲ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದರು.”ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸುದೀರ್ಘ ಹೋರಾಟದ ಫಲವಾಗಿ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪ್ರಮಾಣ ಎಷ್ಟು ಎಂಬ ಕನಿಷ್ಠ ಮಾಹಿತಿಯೂ ಮುಖ್ಯಮಂತ್ರಿಗಳಿಗೆ ಇಲ್ಲದಿರುವುದು ದುರಂತ. ನದಿ ಜೋಡಣೆ ಎಂದರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿದ ಹಾಗಲ್ಲ” ಎಂದು ಕುಮಾರಸ್ವಾಮಿ ಕುಟುಕಿದರು. ವಿಷಯ ಗೊತ್ತಿಲ್ಲದಿದ್ದರೆ ಮುಖ್ಯಮಂತ್ರಿಗಳು ತಕ್ಷಣವೇ ನೀರಾವರಿ ತಜ್ಞರು, ಇಲಾಖೆಯ ಎಂಜಿನಿಯರ್‌ಗಳು ಅಥವಾ ರಾಜ್ಯದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುವ ವಕೀಲರಿಂದ ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಬೇಜವಾಬ್ದಾರಿ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಆಕ್ಷೇಪಿಸಿದರು.
ಕತ್ತಲಲ್ಲಿ ಇಡೀ ರಾಜ್ಯ; ಸಿಎಂ ವಿರುದ್ಧ ಆಕ್ರೋಶ
“ಈಗಿನ ಮುಖ್ಯಮಂತ್ರಿಗಳಿಗೆ ಇದ್ದಕ್ಕಿದ್ದಂತೆ ದಾನಶೂರತನ ಬಂದಂತಿದೆ. ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿ ಜೋಡಣೆಗೆ ಇಡೀ ರಾಜ್ಯದ ಪರವಾಗಿ ಸಮ್ಮತಿ ನೀಡಿರುವುದಾಗಿ ಅವರು ಘೋಷಿಸಿದ್ದಾರೆ. ಆದರೆ ಇಷ್ಟು ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ನ ವಿರೋಧ ಪಕ್ಷಗಳ ಜೊತೆ ಚರ್ಚಿಸಬೇಕೆಂಬ ಕನಿಷ್ಠ ಸೌಜನ್ಯವೂ ಸರ್ಕಾರಕ್ಕೆ ಇಲ್ಲವಾಯಿತು. ಸಿಎಂ ಇಡೀ ರಾಜ್ಯವನ್ನು ಕತ್ತಲಲ್ಲಿಟ್ಟಿದ್ದಾರೆ” ಎಂದು ಕೇಂದ್ರ ಸಚಿವರು ದೂರಿದರು.
ನಮ್ಮ ದುಡ್ಡು, ಬೇರೆಯವರಿಗೆ ನೀರು!
ವಾರದ ಹಿಂದೆ ನೆರೆ ರಾಜ್ಯಗಳ ಮೂವರು ಮುಖ್ಯಮಂತ್ರಿಗಳು ಒಟ್ಟಾಗಿ ಕ್ರೆಸ್ಟ್ ಗೇಟ್‌ಗಳ ಬಟನ್ ಒತ್ತಿದ ಪ್ರಸಂಗವನ್ನು ಉಲ್ಲೇಖಿಸಿದ ಹೆಚ್‌ಡಿಕೆ, “ಹಣ ನಮ್ಮ ರಾಜ್ಯದ್ದು, ಆದರೆ ನೀರು ಮಾತ್ರ ಬೇರೆಯವರಿಗೆ ಸಿಗುತ್ತಿದೆ. ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ವಿಷಯದಲ್ಲೂ ನೆರೆ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಿದ್ದೇನೆ ಎಂದು ಸಿಎಂ ಹೇಳುತ್ತಿದ್ದಾರೆ. ರಾಜ್ಯದ ಹಿತಾಸಕ್ತಿ ಬಲಿ ಕೊಡುವ ಇಂತಹ ನಿರ್ಧಾರಗಳಿಗೆ ಹೇಗೆ ಒಪ್ಪಿಗೆ ನೀಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ಇಡೀ ರಾಜ್ಯದ ಕಿವಿಗೆ ಹೂವು!
“ಹಿಂದೊಮ್ಮೆ ಇದೇ ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಕಿವಿಯಲ್ಲಿ ಹೂವು ಮುಡಿದುಕೊಂಡು ಬಂದು ನಾಟಕ ಮಾಡಿದ್ದರು. ಆದರೆ ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇವಲ ವಿರೋಧ ಪಕ್ಷಗಳಿಗೆ ಮಾತ್ರವಲ್ಲ, ಇಡೀ ರಾಜ್ಯದ ಜನತೆಯ ಕಿವಿಗೆ ಹೂವು ಇಡಲು ಹೊರಟಿದ್ದಾರೆ” ಎಂದು ಕುಮಾರಸ್ವಾಮಿ ಕಟುವಾಗಿ ಲೇವಡಿ ಮಾಡಿದರು
ಕರ್ನಾಟಕಕ್ಕೆ ಸಿಗುತ್ತಿರುವುದು ಕೇವಲ 15 ಟಿಎಂಸಿ; ಕನ್ನಡಿಗರಿಗೆ ಸಿಎಂ ಹಸಿ ಸುಳ್ಳು:
“ಕೃಷ್ಣಾ, ಕಾವೇರಿ, ಗೋದಾವರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ದ್ರೋಹವಾಗುತ್ತಿರುವುದು ಸ್ಪಷ್ಟವಾಗಿದೆ. ಸತ್ಯ ಹೀಗಿದ್ದರೂ ಮುಖ್ಯಮಂತ್ರಿಗಳು ರಾಜ್ಯದ ನೀರಾವರಿ ಹಿತಾಸಕ್ತಿ ವಿಚಾರದಲ್ಲಿ ಮಕ್ಕಳ ಆಟ ಆಡುತ್ತಿದ್ದಾರೆ ಮತ್ತು ಕನ್ನಡಿಗರಿಗೆ ಹಸಿ ಸುಳ್ಳು ಹೇಳುತ್ತಿದ್ದಾರೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನದಿ ಜೋಡಣೆಯ ಹಳೆಯ ಇತಿಹಾಸವನ್ನು ಬಿಚ್ಚಿಟ್ಟ ಕೇಂದ್ರ ಸಚಿವರು, “2023 ರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ 247 ಟಿಎಂಸಿ ನೀರನ್ನು ಬಳಸಿಕೊಳ್ಳುವ ಬಗ್ಗೆ ಸಮಗ್ರ ಯೋಜನಾ ವರದಿ (DPR) ಸಿದ್ಧವಾಗಿತ್ತು. ಆ ವರದಿಯ ಪ್ರಕಾರ ಆಂಧ್ರಪ್ರದೇಶಕ್ಕೆ 90 ಟಿಎಂಸಿ, ತೆಲಂಗಾಣ ಮತ್ತು ತಮಿಳುನಾಡಿಗೆ ತಲಾ 60 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಈ ಬೃಹತ್ ಯೋಜನೆಯಲ್ಲಿ ಕರ್ನಾಟಕಕ್ಕೆ ಹನಿ ನೀರನ್ನೂ ನೀಡಿರಲಿಲ್ಲ” ಎಂದು ನೆನಪಿಸಿದರು.
ದೇವೇಗೌಡರ ಹೋರಾಟದಿಂದ ಸಿಕ್ಕಿದ್ದು 15 ಟಿಎಂಸಿ ಮಾತ್ರ
“ಕರ್ನಾಟಕಕ್ಕೆ ಅನ್ಯಾಯವಾಗಿದ್ದನ್ನು ಪ್ರತಿಭಟಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಿರಂತರ ಹೋರಾಟ ನಡೆಸಿದ ಬಳಿಕವಷ್ಟೇ ರಾಜ್ಯಕ್ಕೆ ಕೇವಲ 15 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಯಿತು. ಅದಕ್ಕೂ ಒಂದು ಕಠಿಣ ಷರತ್ತು ವಿಧಿಸಲಾಗಿದೆ. ಆ ನೀರನ್ನು ಮಲಪ್ರಭಾ ನದಿಯ ಮೂಲಕ ಹರಿಸಿ, ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ, ಮುಖ್ಯಮಂತ್ರಿಗಳು ಯಾವ ಧೈರ್ಯದ ಮೇಲೆ ಯೋಜನೆಗೆ ಸಮ್ಮತಿ ನೀಡಿದ್ದಾರೆ?” ಎಂದು ಪ್ರಶ್ನಿಸಿದರು.
ಸಿಎಂಗೆ ಕುಮಾರಸ್ವಾಮಿ ಅವರ ನೇರ ಪ್ರಶ್ನೆಗಳು:
ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ನಡೆಗೆ ಸಂಬಂಧಿಸಿ ಹಲವು ಕಟು ಪ್ರಶ್ನೆಗಳನ್ನು ಮುಂದಿಟ್ಟರು:
ಸಭೆ ನಡೆದಿದೆಯೇ?: ಈ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರೀಯ ಜಲ ಆಯೋಗ (CWC) ಅಥವಾ ರಾಷ್ಟ್ರೀಯ ಜಲ ಮಂಡಳಿಯ (NWB) ಸಭೆಗಳಲ್ಲಿ ರಾಜ್ಯದ ಪರವಾಗಿ ಚರ್ಚೆ ನಡೆದಿದೆಯೇ?
ಯಾವ ಆಧಾರದ ಮೇಲೆ ಒಪ್ಪಿಗೆ?: ರಾಜ್ಯಕ್ಕೆ ಸೂಕ್ತ ನೀರಿನ ಪಾಲೇ ಸಿಗದೇ ಇರುವಾಗ, ಕರ್ನಾಟಕ ಈ ಯೋಜನೆಗೆ ಸಮ್ಮತಿಸಿದೆ ಮತ್ತು 1 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಿದೆ ಎಂದು ಸಿಎಂ ಯಾವ ಆಧಾರದ ಮೇಲೆ ಪ್ರಕಟಿಸಿದರು?
ರಾಷ್ಟ್ರೀಯ ಯೋಜನೆ ಹೇಗೆ?: ಈ ಯೋಜನೆಯನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ಯೋಜನೆ’ಯನ್ನಾಗಿ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಇದರಿಂದ ಕರ್ನಾಟಕಕ್ಕೆ ಸಿಗುವ ನಿವ್ವಳ ಲಾಭವೇನು ಎಂಬುದನ್ನು ರಾಜ್ಯದ ಜನತೆಗೆ ಬಹಿರಂಗಪಡಿಸಲಿ.
“ನದಿ ಜೋಡಣೆಗೆ ನಮ್ಮದೇನೂ ತಕರಾರಿಲ್ಲ. ಆದರೆ ನಮ್ಮ ಹಕ್ಕಿನ ನೀರನ್ನು ಬಿಟ್ಟುಕೊಟ್ಟು ರಾಜ್ಯಕ್ಕೆ ಅನ್ಯಾಯ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಈ ಕೂಡಲೇ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕು” ಎಂದು ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ನೀರಿನ ಮಿತಿ ನಿಗದಿ ಆಗದೆ ಸಮ್ಮತಿ ನೀಡಬೇಡಿ
“ಈಗಾಗಲೇ ಕರ್ನಾಟಕವು ಹಲವಾರು ಜಲವಿವಾದಗಳಲ್ಲಿ ಕಾನೂನು ಹೋರಾಟ ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ನೀರಿನ ಪಾಲು ಎಷ್ಟು ಎಂಬುದು ನಿರ್ಧಾರ ಆಗುವ ಮುನ್ನವೇ ಯೋಜನೆಗೆ ಒಪ್ಪಿಗೆ ಕೊಟ್ಟರೆ, ಅದು ಕನ್ನಡಿಗರಿಗೆ ಮಾಡುವ ಅತ್ಯಂತ ದೊಡ್ಡ ದ್ರೋಹವಾಗುತ್ತದೆ. ನಿಮಗೆ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ಸುಮ್ಮನಿರಿ. ನಿಮ್ಮದೇ ಸಂಪುಟದ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ‘ಕೃಷ್ಣಾ ಕಣ್ಣೀರ ಕಥೆ’ ಎಂಬ ಪುಸ್ತಕ ಬರೆದಿದ್ದಾರೆ, ಅವರಿಗೆ ಎಲ್ಲ ಇತಿಹಾಸ ಗೊತ್ತಿದೆ. ಅವರ ಬಳಿಯಾದರೂ ಕುಳಿತು ಸಲಹೆ ಪಡೆದುಕೊಳ್ಳಿ” ಎಂದು ಕುಮಾರಸ್ವಾಮಿ ಕಟುವಾಗಿ ಹೇಳಿದರು.
ನಮ್ಮ ದುಡ್ಡು, ನೆರೆರಾಜ್ಯಗಳಿಗೆ ನೀರು!
ವಾರದ ಹಿಂದೆ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಕ್ರೆಸ್ಟ್ ಗೇಟ್‌ಗಳ ಬಟನ್ ಒತ್ತಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು, “ದುಡ್ಡು ನಮ್ಮ ರಾಜ್ಯದ್ದು, ಆದರೆ ನೀರು ಮಾತ್ರ ಬೇರೆಯವರ ಪಾಲಾಗುತ್ತಿದೆ. ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ವಿಷಯದಲ್ಲೂ ನೆರೆ ರಾಜ್ಯಗಳ ಸಿಎಂಗಳ ಜೊತೆ ಚರ್ಚಿಸಿದ್ದೇನೆ ಎಂದು ಸಿಎಂ ಹೇಳುತ್ತಿದ್ದಾರೆ. ರಾಜ್ಯದ ನೀರಾವರಿ ಹಿತಾಸಕ್ತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಕ್ಕಳ ಆಟ ಆಡುತ್ತಿದ್ದಾರೆ ಮತ್ತು ಕನ್ನಡಿಗರಿಗೆ ಹಸಿ ಸುಳ್ಳು ಹೇಳುತ್ತಿದ್ದಾರೆ” ಎಂದು ಹೆಚ್‌ಡಿಕೆ ಆಪಾದಿಸಿದರು.

