✦ ಉತ್ತಮ ಪೋಷಕಾಂಶ, ವೈಯಕ್ತಿಕ ಶುಚಿತ್ವ, ನಿಯತ ವ್ಯಾಯಾಮ, ವಿಶ್ರಾಂತಿ, ಆಹಾರ ಸೇವನೆಯಲ್ಲಿ ಮಾರ್ಪಾಡು-ಇವುಗಳಿಗೆ ಒತ್ತು ನೀಡುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು, ಹಾಗೂ ಎಲ್ಲದಕ್ಕಿಂತ ಮಿಗಿಲಾಗಿ ಸಕರಾತ್ಮಕ ಮಾನಸಿಕ ಧೋರಣೆಯನ್ನು ಮೈಗೂಡಿಸಿಕೊಳ್ಳಬೇಕು.
✦ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಅಸಾಮಾನ್ಯ ಮತ್ತು ಶಂಕಾಸ್ಪದ ಚಿಹ್ನೆಗಳು ಮತ್ತು ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಆರೋಗ್ಯಕರವಾಗಿದ್ದರೂ ಕೂಡ ನಿಯತವಾಗಿ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
✦ ನೀವು ಕುಟುಂಬ ವೈದ್ಯರನ್ನು ಹೊಂದಬೇಕು ಹಾಗೂ ಪದೇ ಪದೇ ವೈದ್ಯರನ್ನು ಬದಲಾಯಿಸುವುದನ್ನು ತಪ್ಪಿಸಬೇಕು. ಸ್ವಯಂ ಮಾತ್ರೆಗಳನ್ನು ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸಬಾರದು. ನಿಮ್ಮ ಎಲ್ಲ ವೈದ್ಯಕೀಯ ದಾಖಲೆಗಳ ಒಂದು ಕಡತವನ್ನು ನಿರ್ವಹಣೆ ಮಾಡಬೇಕು, ಅಗತ್ಯವಿದ್ದಾಗ ನಿಮ್ಮ ಕುಟುಂಬದ ಸದಸ್ಯರಿಗೆ ಅದು ಲಭ್ಯವಿರಬೇಕು.
✦ನಿಮ್ಮ ಹೆಸರು, ವಿಳಾಸ, ಸಂಪರ್ಕಿಸಬೇಕಾದ ವ್ಯಕ್ತಿಗಳ ಫೋನ್ ನಂಬರ್‍ಗಳು ಹಾಗೂ ನೀವು ಸೇವಿಸುವ ಔಷಧ-ಮಾತ್ರೆಗ ವಿವರಗಳೊಂದಿಗೆ ನಿಮ್ಮ ವೈದ್ಯರ ದೂರವಾಣಿ ಸಂಖ್ಯೆ ವಿವರಗಳನ್ನು ಒಳಗೊಂಡ ಒಂದು ಕಾರ್ಡ್ ಯಾವಾಗಲೂ ನಿಮ್ಮೊಂದಿಗೆ ಇರಲಿ. ವೈದ್ಯರ ಸಲಹೆ ಇಲ್ಲದೇ ಹಠಾತ್ತನೇ ನಿಮ್ಮ ಔಷಧಿಗಳ ಸೇವನೆಯನ್ನು ನಿಲ್ಲಿಸಬಾರದು.
✦ ಸೋಂಕು ತಡೆಗಟ್ಟಲು ಉತ್ತಮ ಮೌಖಿಕ ಆರೋಗ್ಯ ನಿರ್ವಹಣೆ ಮಾಡಬೇಕು. ಕೃತಕ ದಂತಪಂಕ್ತಿಯನ್ನು ಹಾಕಿಸಿಕೊಳ್ಳಲು ನಿರಾಕರಿಸಬಾರದು. ಇದು ನಿಮ್ಮ ಆಹಾರ ಸೇವನೆ ಮತ್ತು ಪಚನ ಕ್ರಿಯೆಯನ್ನು ಸುಧಾರಿಸುತ್ತದೆ, ಮಾತನಾಡುವಾಗ ಸ್ಪಷ್ಟತೆ ಇರುತ್ತದೆ ಹಾಗೂ ಮುಖದ ಲಕ್ಷಣಗಳನ್ನು ವೃದ್ಧಿಸುತ್ತದೆ.ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ನೀವು ಚಟುವಟಿಕೆಯಿಂದ ಕ್ರಿಯಾಶೀಲವಾಗಿ ಇರಬೇಕು. ಸಾಕಷ್ಟು ಬೆಳಕು ಇರುವ ಸ್ಥಳದಲ್ಲಿ ಓದಬೇಕು ಮತ್ತು ಬರೆಯಬೇಕು.
✦ ವೃದ್ಧರಿಗಾಗಿ ನಿರ್ದಿಷ್ಟ ಪಥ್ಯಾಹಾರ ನಿಯಮ ಇಲ್ಲವಾದರೂ, ಆರೋಗ್ಯಕರ ಆಹಾರ ಸೇವಿಸಬೇಕು ಹಾಗೂ ಮಿತವಾಗಿ ತಿನ್ನಬೇಕು. ಅತಿಯಾದ ಆಹಾರ ಸೇವನೆ ಬೇಡ. ಅಧಿಕ ನಾರಿನಂಶ ಇರುವ ಆಹಾರವನ್ನು ಸೇವಿಸಬೇಕು. ಪ್ರಾಣಿ ಜನ್ಯ ಕೊಬ್ಬು ಮತ್ತು ಉಪ್ಪನ್ನು ತಪ್ಪಿಸಬೇಕು.
✦ ಉತ್ತಮ ಮತ್ತು ಪೌಷ್ಠಿಕಾಂಶ ಉಪಾಹಾರ ಸೇವಿಸಬೇಕು. ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನ ಮಿತವಾಗಿರಲಿ. ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ಇರಲಿ. ಕೊಬ್ಬು ಮತ್ತು ಮಸಾಲೆ ಆಹಾರ ಪದಾರ್ಥಗಳ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಪ್ರತಿ ದಿನ 6 ರಿಂದ 8 ಲೋಟಗಳಷ್ಟು ನೀರು ಕುಡಿಯಬೇಕು.
✦ ಫೋಲಿಕ್ ಆಮ್ಲ, ವಿಟಮಿನ್ ಬಿ-12, ಡಿ ಮತ್ತು ಇ ಇವುಗಳ ಉತ್ತಮ ಪೂರೈಕೆಗಾಗಿ ಬಹು ಜೀವಸತ್ವ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು. ಅತ್ಯಂತ ಶ್ರಮದಾಯಿಕ ವ್ಯಾಯಾಮ ಮಾಡಬಾರದು. ವಯೋವೃದ್ಧರಿಗೆ ವಾಕಿಂಗ್ ಅಥವಾ ವಾಯು ವಿಹಾರ ಅತ್ಯುತ್ತಮ ವ್ಯಾಯಾಮ. ಯಾವಾಗಲು ವಿಶ್ರಾಂತಿ ಮತ್ತು ವಿರಾಮ ಪಡೆದರೂ ಸದಾ ಕ್ರಿಯಾಶೀಲವಾಗಿರಬೇಕು.
✦ ಹತಾಶೆ, ಖಿನ್ನತೆ, ಚಿಂತೆ, ಆತಂಕ, ಭಯ ದು:ಖ, ಹೊಟ್ಟೆ ಕಿಚ್ಚು, ದ್ವೇಷ, ಇತ್ಯಾದಿಯಂಥ ಭಾವನೆಗಳನ್ನು ಸಾಧ್ಯವಾದಷ್ಟೂ ತಪ್ಪಿಸಿ. ಇವುಗಳನು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಗೋಚರಿಸುವ ದೈಹಿಕ ಅಸಾಮಥ್ರ್ಯಕ್ಕೆ ಕಾರಣವಾಗುತ್ತದೆ. ಉದ್ವೇಗವು ಹೃದಯದ ಮೇಲೆ ಹೆಚ್ಚು ಒತ್ತಡ ಉಂಟು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.