ಬೆಂಗಳೂರು: ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಘೋಷವಾಕ್ಯ ಯಥಾಸ್ಥಿತಿಯಲ್ಲಿಡುವಂತೆ ಸೂಚನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕರ್ಯದರ್ಶಿ ಮಣಿವಣ್ಣನ್ ಅವರ ಆದೇಶದ ಹಿನ್ನೆಲೆಯಲ್ಲಿ ವಸತಿ ಶಾಲೆಗಳ ಘೋಷವಾಕ್ಯವನ್ನು ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ’ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಲಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯವನ್ನೇ ಬದಲಾವಣೆ ಮಾಡಿದ್ದ ಇಲಾಖೆಯ ಕ್ರಮಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ರಾಷ್ಟ್ರಕವಿ ಕುವೆಂಪುಗೆ ಮಾಡಿದ ಅವಮಾನ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಘೋಷವಾಕ್ಯ ಬದಲಾವಣೆ ರಾಜಕೀಯ ತಿರುವು ಕೂಡ ಪಡೆದುಕೊಂಡಿತ್ತು. ವಸತಿ ಶಾಲೆಯ ಘೋಷವಾಕ್ಯ ಬದಲಾವಣೆ ವಿಚಾರ ತೀವ್ರ ಚರ್ಚೆಗೆ ಗ್ರಸವಾದ ಬೆನ್ನಲ್ಲೇ ಇದೀಗ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಎಲ್ಲಾ ವಸತಿ ಶಾಲೆಗಳಲ್ಲಿಯೂ ಘೋಷವಾಕ್ಯ ಯಥಾಸ್ಥಿತಿಯಲ್ಲಿಯೇ ಇಡುವಂತೆ ಟೆಲಿಗ್ರಾಂ ಮೂಲಕ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.
ಶಾಲೆಗಳ ಗೋಡೆಗಳಲ್ಲಿ ಬರೆದ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎನ್ನುವ ಅರ್ಥಪೂರ್ಣ ವಾಕ್ಯ ವನ್ನು ಅರ್ಥ ಮಾಡಲು ಹೊರಟು ಕುವೆಂಪು ವಾಣಿಗೆ ಅನ್ಯಾಯ ಎಸಗಲು ಮುಂದಾಗಿದೆ. ಕೈ ಮುಗಿದು ಒಳಗೆ ಬಾ ಎನ್ನುವ ಬದಲಿಗೆ ಧೈರ್ಯವಾಗಿ ಪ್ರಶ್ನಿಸು ಎನ್ನುವುದನ್ನು ಸೇರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆ ಮೂಲಕ ಮತ್ತೆ ಸಾರ್ವಜನಿಕ ವಲಯದಲ್ಲಿ ಕಾಂಗ್ರೆಸ್ ಛೀಮಾರಿ ಹಾಕಿಸಿಕೊಂಡಿದೆ.