ಯಾದಗಿರಿ/ಸುರಪುರ: ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಜನರು ಬೆಂಕಿಗಾಹುತಿಯಾಗಿದ್ದಾರೆ. ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದ ವಾಹನವು ಎದುರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಘಟನೆಯ ವಿವರ:
ರಾಯಚೂರು ಜಿಲ್ಲೆಯ ಸಿರವಾರ ನಿವಾಸಿಗಳಾದ ಈ ಕುಟುಂಬವು ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾದ ತಕ್ಷಣ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಲಾಕ್ ತೆರೆಯಲು ಸಾಧ್ಯವಾಗದೆ ಕಾರಿನಲ್ಲಿದ್ದ 9 ಮಂದಿ ಸಜೀವ ದಹನವಾಗಿದ್ದಾರೆ.
ಮೃತರ ವಿವರ:
ಮೃತರನ್ನು ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣಾನಾಯಕ್ (52), ಅವರ ಪತ್ನಿ ಅನಂತಕಲಾ (45), ಶರಣಪ್ಪ (36), ನಿಸರ್ಗ (30), ಚಿಕ್ಕ ಮಕ್ಕಳಾದ ಸಿದ್ದಾರ್ಥ (3), ಅದ್ವಿಕ್ (5), ಶ್ರೀನಿಧಿ (1.5), ಶಶಿಕಲಾ (30) ಮತ್ತು ಚಂದನ್ (8) ಎಂದು ಗುರುತಿಸಲಾಗಿದೆ.
ಪವಾಡಸದೃಶವಾಗಿ ಬದುಕುಳಿದ ಬಾಲಕ:
ಈ ಭೀಕರ ಅಪಘಾತದಲ್ಲಿ ಹತ್ತು ವರ್ಷದ ಬಾಲಕ ವಿರಾಟ್ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಬೆಂಕಿ ಹರಡುವ ಮುನ್ನವೇ ಹೊರಬಂದಿದ್ದರಿಂದ ಸುರಕ್ಷಿತವಾಗಿದ್ದಾರೆ.
ಪೊಲೀಸ್ ಭೇಟಿ:
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರಿನ ಸಿರವಾರದಲ್ಲಿ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

