ಕೊಳ್ಳೆಗಾಲ: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಮಾನವ-ವನ್ಯಜೀವಿ ಘರ್ಷಣೆ,ವನ್ಯಜೀವಿಗಳು ನಾಡಿನತ್ತ ಬರುತ್ತಿರುವ ಪ್ರಕರಣಗಳ ನಿಯಂತ್ರಣಕ್ಕಾಗಿ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದ್ದು,ವನ್ಯಜೀವಿಗಳ ಚಲನ ಕುರಿತು ತಕ್ಷಣ ಮಾಹಿತಿ ಪಡೆದು, ಕಾಡಿನಂಚಿನ ಗ್ರಾಮಗಳಿಗೆ ಕೂಡಲೇ ಎಚ್ಚರಿಕೆ ನೀಡಲು ಕೆಲಸ ಆರಂಭಿಸಿದೆ.
ಕೊಳ್ಳೆಗಾಲದಲ್ಲಿ ಎಂ.ಎಂ. ಹಿಲ್ಸ್ ಅರಣ್ಯ ವಿಭಾಗದ ಸಮಗ್ರ ಕಮಾಂಡ್ ಸೆಂಟರ್ ಅನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು,ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಎ.ಐ ಕ್ಯಾಮೆರಾ, ಥರ್ಮಲ್ ಡ್ರೋನ್, ರಿಯಲ್-ಟೈಮ್ ನಿಗಾವ್ಯವಸ್ಥೆ ಮಹತ್ವದ ಪಾತ್ರ ವಹಿಸಲಿವೆ.ಈ ಕೇಂದ್ರದ ಮೂಲಕ ವನ್ಯಜೀವಿಗಳ ಚಲನ ಕುರಿತು ತಕ್ಷಣ ಮಾಹಿತಿ ಸಿಗುತ್ತಿದ್ದು, ಕಾಡಿನಂಚಿನ ಗ್ರಾಮಗಳಿಗೆ ಕೂಡಲೇ ಎಚ್ಚರಿಕೆ ನೀಡಲು ಸಾಧ್ಯವಾಗುತ್ತದೆ. ನಾಗರಹೊಳೆ, ಕಾಳಿ, ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಇಂತಹ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದರು.
ಗಸ್ತು ಹೆಚ್ಚಳದ ಮೂಲಕ ಹಾಗೂ ಅರಣ್ಯದಂಚಿನ ಜನರಲ್ಲಿ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ ಒಂದು ಯಶಸ್ವೀ ಪರಿಹಾರ ಆಗಲಿದೆ. ನಾಗರಹೊಳೆ, ಎಂ.ಎಂ.ಹಿಲ್ಸ್, ಕಾಳಿ, ಮಡಿಕೇರಿ ಸೇರಿ ನಾಲ್ಕು ಕಡೆಗಳಲ್ಲಿ ಕಮಾಂಡ್ ಕೇಂದ್ರ ಸಿದ್ಧವಾಗಿದ್ದು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಚಿಕ್ಕಮಗಳೂರು ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಾಸನ ವಲಯದಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಮಟ್ಟದ ಕೇಂದ್ರ ಸಿದ್ಧವಾಗುತ್ತಿದ್ದು, ಅಧಿವೇಶನದ ನಂತರ ಇದನ್ನು ಉದ್ಘಾಟಿಸಲಾಗುವುದು. ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಬಳಸಿ ವನ್ಯಜೀವಿಗಳ ಚಲನ ವಲನದ ಬಗ್ಗೆ ನಿಗಾ ಇಟ್ಟು, ಯಾವ ಕಾಡಿನಂಚಿನ ಗ್ರಾಮದ ಬಳಿ ವನ್ಯಜೀವಿ ಇದೆ ಎಂಬ ಬಗ್ಗೆ ತತ್ ಕ್ಷಣ ಮಾಹಿತಿ ನೀಡಿದರೆ ಅಮೂಲ್ಯ ಜೀವಹಾನಿ ತಡೆಯಬಹುದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಅರಣ್ಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಶಿವನಸಮುದ್ರ ಜಲವಿದ್ಯುತ್ ಗಾರದ ಬಳಿಯ ನಾಲೆಯಲ್ಲಿ ಸಿಲುಕಿದ್ದ ಆನೆಯನ್ನು 40 ಅಡಿ ಆಳದಿಂದ ಯಶಸ್ವಿಯಾಗಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಹಾಗೂ ಪಶುವೈದ್ಯರನ್ನು ಇಂದು ಕೊಳ್ಳೆಗಾಲದಲ್ಲಿ ಸನ್ಮಾನಿಸಿದರು.ಉತ್ತಮ ಕೆಲಸ ಮಾಡಿದವರನ್ನು ಸದಾ ಪ್ರೋತ್ಸಾಹಿಸಲಾಗುತ್ತದೆ; ಆದರೆ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಸೂಚಿಸಿದರು.

