Sat. Jun 6th, 2026

ಏಪ್ರಿಲ್ 5ರ ಐಪಿಎಲ್ ಪಂದ್ಯ: ಕ್ರಿಕೆಟ್ ಅಭಿಮಾನಿಗಳಿಗೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಏಪ್ರಿಲ್ 5, 2026ರಂದು ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ, ಕ್ರೀಡಾಭಿಮಾನಿಗಳ ಸುಗಮ ಪ್ರಯಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಅಂದು ರಾತ್ರಿ ಪಂದ್ಯ ಮುಗಿದ ನಂತರ ಪ್ರೇಕ್ಷಕರು ಸುರಕ್ಷಿತವಾಗಿ ಮನೆ ತಲುಪಲು ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ.

ವಿಸ್ತರಿತ ವೇಳಾಪಟ್ಟಿ ವಿವರ:

ಪಂದ್ಯದ ದಿನದಂದು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸಂಚಾರವು ರಾತ್ರಿ 11:00 ಗಂಟೆಯ ಬದಲಾಗಿ ಮಧ್ಯರಾತ್ರಿಯ ನಂತರವೂ ಲಭ್ಯವಿರಲಿದೆ.

ಮಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ): ಇಲ್ಲಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 01:30ಕ್ಕೆ ಹೊರಡಲಿದೆ.

ಆರ್.ವಿ. ರಸ್ತೆ: ಇಲ್ಲಿಂದ ಕೊನೆಯ ಸೇವೆ ಮುಂಜಾನೆ 02:00 ಗಂಟೆಗೆ ಇರಲಿದೆ.

ಇತರೆ ನಿಲ್ದಾಣಗಳು: ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12:30ಕ್ಕೆ, ಚೆಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ನಿಲ್ದಾಣಗಳಿಂದ ರಾತ್ರಿ 12:45ಕ್ಕೆ ಹಾಗೂ ಬೊಮ್ಮಸಂದ್ರದಿಂದ ರಾತ್ರಿ 12:30ಕ್ಕೆ ಕೊನೆಯ ರೈಲುಗಳು ಹೊರಡಲಿವೆ.

ಡಿಜಿಟಲ್ ಟಿಕೆಟ್ ಸೌಲಭ್ಯ:

ರಶ್ ತಪ್ಪಿಸಲು ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲೇ ಮೆಟ್ರೋ ಪ್ರಯಾಣಕ್ಕಾಗಿ ‘ಕ್ಯೂಆರ್ (QR) ಕೋಡ್’ ಒಳಗೊಂಡಿರಲಿದ್ದು, ಇದು ಎರಡು ಮಾರ್ಗಗಳ ಪ್ರಯಾಣಕ್ಕೆ ಅನ್ವಯವಾಗಲಿದೆ.

ಸೂಚನೆ:

ಕಬ್ಬನ್ ರಸ್ತೆ ಭಾಗದ ಗೇಟ್‌ಗಳ ಮೂಲಕ ಕ್ರೀಡಾಂಗಣ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಲು ಕೋರಲಾಗಿದೆ.

ಲಿಂಕ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಬಿಎಂಆರ್‌ಸಿಎಲ್ ತಿಳಿಸಿದೆ.

ನಿಗದಿತ ದರದಲ್ಲಿ ಪಾರ್ಕಿಂಗ್ ಸೌಲಭ್ಯ:

ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯದ ದಿನದಂದು ದ್ವಿಚಕ್ರ ವಾಹನಗಳಿಗೆ 30 ರೂ. ಹಾಗೂ ಕಾರುಗಳಿಗೆ 60 ರೂ. ಪಾರ್ಕಿಂಗ್ ದರ ನಿಗದಿಪಡಿಸಲಾಗಿದೆ. ಈ ಸೌಲಭ್ಯವು ಅಂದು ಮೆಟ್ರೋ ಸಂಚಾರ ಮುಕ್ತಾಯವಾಗುವವರೆಗೆ ಲಭ್ಯವಿರಲಿದೆ. ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ನಿಲ್ದಾಣಗಳಲ್ಲಿ ನಿಲ್ಲಿಸಿ, ಮೆಟ್ರೋ ಮೂಲಕ ಕಬ್ಬನ್ ಪಾರ್ಕ್ ಅಥವಾ ಎಂ.ಜಿ. ರಸ್ತೆ ನಿಲ್ದಾಣಗಳಿಗೆ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಸುಗಮ ಸಂಚಾರಕ್ಕೆ ಸಹಕರಿಸಿ:

ಕೇಂದ್ರ ವ್ಯವಹಾರ ಪ್ರದೇಶ (CBD) ಮತ್ತು ಸ್ಟೇಡಿಯಂ ಸುತ್ತಮುತ್ತ ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಸೇವೆಯನ್ನು ಬಳಸಿಕೊಳ್ಳಲು ಕೋರಲಾಗಿದೆ. ಪ್ರಯಾಣಿಕರು ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ, ಕ್ರೀಡಾಂಗಣ ನಿರ್ವಹಣೆ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು.

ತುರ್ತು ಕ್ರಮಗಳ ಮುನ್ನೆಚ್ಚರಿಕೆ:

ಜನಸಂದಣಿ ಹೆಚ್ಚಾದಲ್ಲಿ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ನಿಯಂತ್ರಿಸುವ ಅಥವಾ ಮುಚ್ಚುವ ಹಕ್ಕನ್ನು ಬಿಎಂಆರ್‌ಸಿಎಲ್ ಕಾಯ್ದಿರಿಸಿದೆ.

 


Share this with Friends

Related Post