Thu. Jun 11th, 2026

ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಭಾರಿ ಪರಿಷ್ಕರಣೆ: 3.89 ಲಕ್ಷ ಅನರ್ಹರ ಖಾತೆಗೆ ಹಣ ಜಮೆ ಸ್ಥಗಿತ!

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆಯುತ್ತಿದ್ದ ಲಕ್ಷಾಂತರ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಭಾರಿ ಆಘಾತ ನೀಡಿದೆ. ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಒಟ್ಟು ಫಲಾನುಭವಿಗಳ ಪಟ್ಟಿಯನ್ನು ಕಠಿಣ ಪರಿಷ್ಕರಣೆಗೆ ಒಳಪಡಿಸಲಾಗುತ್ತಿದ್ದು, ಬರೋಬ್ಬರಿ 3.89 ಲಕ್ಷಕ್ಕೂ ಅಧಿಕ ಮಹಿಳೆಯರ ಮಾಸಿಕ ಆರ್ಥಿಕ ನೆರವನ್ನು ಶಾಶ್ವತವಾಗಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.

ಸರ್ಕಾರದ ಇತ್ತೀಚಿನ ಆಂತರಿಕ ಆಡಿಟ್ ಪರಿಶೀಲನೆಯಲ್ಲಿ ನಿಯಮ ಬಾಹಿರವಾಗಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆಯಾಗುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಯಾರಿಗೆಲ್ಲಾ ಶಾಕ್?

ಮಾಹಿತಿ ಮುಚ್ಚಿಟ್ಟ ತೆರಿಗೆದಾರರು: ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ, ಕುಟುಂಬದಲ್ಲಿ ಆದಾಯ ತೆರಿಗೆ (Income Tax) ಹಾಗೂ ಜಿಎಸ್‌ಟಿ (GST) ಪಾವತಿದಾರರಿದ್ದರೂ ಸುಳ್ಳು ಮಾಹಿತಿ ನೀಡಿ ತಿಂಗಳ ಹಣ ಪಡೆಯುತ್ತಿದ್ದ ಸಾವಿರಾರು ಮಹಿಳೆಯರ ಸೌಲಭ್ಯವನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗುತ್ತಿದೆ.

ಮೃತ ಫಲಾನುಭವಿಗಳ ಖಾತೆಗಳು: ರಾಜ್ಯದಲ್ಲಿ ಮಹಿಳೆಯರು ಮರಣ ಹೊಂದಿದ ನಂತರವೂ ಅವರ ಬ್ಯಾಂಕ್ ಖಾತೆಗಳಿಗೆ ತಾಂತ್ರಿಕ ಲೋಪದಿಂದಾಗಿ ₹2,000 ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸುಮಾರು 1.95 ಲಕ್ಷಕ್ಕೂ ಅಧಿಕ ಮೃತ ಮಹಿಳೆಯರ ಅರ್ಜಿಗಳನ್ನು ಸಿಸ್ಟಮ್‌ನಿಂದಲೇ ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ತಿದೆ.

ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯದ ಬಿಸಿ!

ಕೇವಲ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುವುದು ಮಾತ್ರವಲ್ಲದೆ, ಪ್ರಸ್ತುತ ಹಣ ಪಡೆಯುತ್ತಿರುವ ನೈಜ ಫಲಾನುಭವಿಗಳಿಗೂ ಇಲಾಖೆ ಹೊಸ ನಿಯಮಗಳ ಶಾಕ್ ನೀಡಲು ಸಜ್ಜಾಗಿದೆ. ಇನ್ಮುಂದೆ ನಕಲಿ ಅರ್ಜಿಗಳನ್ನು ತಡೆಯುವ ಭಾಗವಾಗಿ ಪ್ರತಿ ವರ್ಷ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ (ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅಥೆಂಟಿಕೇಶನ್) ಅಥವಾ ಜೀವಿತ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿ ಮನೆ ಮನೆಗೆ ತೆರಳಿ ಮೃತರ ಮತ್ತು ಊರು ಬಿಟ್ಟು ಹೋದವರ ನಿಖರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ತಪ್ಪು ಮಾಹಿತಿ ನೀಡಿ ಸಿಕ್ಕಿಬೀಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.

 


Share this with Friends

Related Post