ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುಸ್ತಕ ಪ್ರೇಮಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಬಂಪರ್ ಕೊಡುಗೆಯೊಂದನ್ನು ನೀಡಿದೆ. 2026ರ ನವೆಂಬರ್ ತಿಂಗಳು ಪೂರ್ತಿ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡಾ 50% ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ಪ್ರಾಧಿಕಾರದ ನೂರಾರು ಮೌಲ್ಯಯುತ ಕೃತಿಗಳನ್ನು ಜನಸಾಮಾನ್ಯರಿಗೆ ಅತ್ಯಂತ ಸುಲಭ ಬೆಲೆಯಲ್ಲಿ ತಲುಪಿಸುವ ಉದ್ದೇಶದಿಂದ ಈ ವಿಶೇಷ ರಿಯಾಯಿತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ರಿಯಾಯಿತಿ ಎಲ್ಲೆಲ್ಲಿ ಲಭ್ಯ?
ಬೆಂಗಳೂರು: ಸಿರಿಗನ್ನಡ ಪುಸ್ತಕ ಮಳಿಗೆ, ಕನ್ನಡ ಭವನ (ಸಂಪರ್ಕ ಸಂಖ್ಯೆ: 080-22107705).
ರಾಜ್ಯಾದ್ಯಂತ: ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳು.
ಪ್ರಾಧಿಕಾರದ ಅಧಿಕೃತ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳು.
ಆನ್ಲೈನ್ ಖರೀದಿ: ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://kpp.karnataka.gov.in ನ ‘ಆನ್ಲೈನ್ ಪುಸ್ತಕ ಖರೀದಿ’ ವಿಭಾಗದಲ್ಲೂ ಶೇ. 50 ರಿಯಾಯಿತಿ ಸಿಗಲಿದೆ.
ವೈವಿಧ್ಯಮಯ ಸಾಹಿತ್ಯದ ಭಂಡಾರ:
ಕನ್ನಡ ಪುಸ್ತಕ ಪ್ರಾಧಿಕಾರವು ಈವರೆಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅತ್ಯಂತ ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದೆ. ಪ್ರಾಜ್ಞರಿಂದ ರಚಿತವಾದ ವ್ಯಕ್ತಿಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯದ ಅಧ್ಯಯನಗಳು, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ ಹಾಗೂ ಕೃಷಿ ಸೇರಿದಂತೆ ಹತ್ತಾರು ವಿಷಯಗಳ ಅಪರೂಪದ ಪುಸ್ತಕಗಳು ಈ ರಿಯಾಯಿತಿ ದರದಲ್ಲಿ ಓದುಗರಿಗೆ ಸಿಗಲಿವೆ. ಪುಸ್ತಕ ಪ್ರಿಯರು ನವೆಂಬರ್ ತಿಂಗಳ ಪೂರ್ತಿ ಸಿಗುವ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕಾಗಿ ಪ್ರಾಧಿಕಾರ ಕೋರಿದೆ.

