ಬೆಂಗಳೂರು: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ತುರ್ತು ವೈದ್ಯಕೀಯ ಆ್ಯಂಬುಲೆನ್ಸ್ ಸೇವೆಗಳು ಅಧಿಕೃತವಾಗಿ ಲಭ್ಯವಾಗಲಿವೆ. ಈ ಹೈಟೆಕ್ ವೈದ್ಯಕೀಯ ವ್ಯವಸ್ಥೆಯು ಸಾರ್ವಜನಿಕರಿಗೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ದೇಶದ ಮೊದಲ “108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ”ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಜೆಟ್ ಘೋಷಣೆ ಜಾರಿ:
ಇಡೀ ದೇಶದಲ್ಲೇ ಇಂತಹ ಕೇಂದ್ರೀಕೃತ ಕಂಟ್ರೋಲ್ ರೂಮ್ ಆಧಾರಿತ ಆರೋಗ್ಯ ಸೇವೆಯನ್ನು ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅತ್ಯಂತ ವೇಗವಾಗಿ ಚಿಕಿತ್ಸೆ ಒದಗಿಸಲು ಈ ಅತ್ಯಾಧುನಿಕ ತಂತ್ರಜ್ಞಾನ ಸಹಕಾರಿಯಾಗಲಿದೆ. ರಾಜ್ಯದಲ್ಲಿ ಕಳೆದ 18 ವರ್ಷಗಳಿಂದ 108 ಆ್ಯಂಬುಲೆನ್ಸ್ ಸೇವೆ ಚಾಲ್ತಿಯಲ್ಲಿದೆ. 2025-26ರ ಬಜೆಟ್ ಘೋಷಣೆಯ ಅನ್ವಯ, ಈ ತುರ್ತು ಆ್ಯಂಬುಲೆನ್ಸ್ ಸೇವೆಗಳ ಕಟ್ಟುನಿಟ್ಟಾದ ನಿರ್ವಹಣೆಗಾಗಿ ಈ ವಿಶೇಷ ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಸಿಎಂ ವಿವರಿಸಿದರು.
ಜೀವ ಉಳಿಸುವ ‘ಗೋಲ್ಡನ್ ಅವರ್’ ಚಿಕಿತ್ಸೆ:
ರಸ್ತೆ ಅಪಘಾತಗಳು, ಗರ್ಭಿಣಿಯರ ಹೆರಿಗೆಯ ತುರ್ತು ಹಾಗೂ ಹೃದಯಾಘಾತದಂತಹ ಜೀವನ್ಮರಣದ ಹೋರಾಟದ ಕ್ಲಿಷ್ಟ ಸಂದರ್ಭಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡುವುದು ಅತ್ಯಗತ್ಯ. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯ (ಗೋಲ್ಡನ್ ಅವರ್) ಅವಧಿಯಲ್ಲಿ ಸೂಕ್ತ ವೈದ್ಯಕೀಯ ನೆರವು ದೊರೆತರೆ ರೋಗಿಗಳು ಬದುಕುವ ಸಾಧ್ಯತೆ ಗರಿಷ್ಠವಾಗಿರುತ್ತದೆ. ಈ ಗೋಲ್ಡನ್ ಅವರ್ ಚಿಕಿತ್ಸೆಯಿಂದಾಗಿ ಈಗಾಗಲೇ ಶೇಕಡಾ 80 ರಷ್ಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬೆಂಗಳೂರು ನಗರವೊಂದರಲ್ಲೇ 65 ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ತುರ್ತು ಸೇವೆಗೆ ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು.
ಹಿಂದೆ 108 ಆ್ಯಂಬುಲೆನ್ಸ್ ವ್ಯವಸ್ಥೆಯು ಖಾಸಗಿ ಸಂಸ್ಥೆಗಳ ಅಧೀನದಲ್ಲಿದ್ದಾಗ ಅವರ ಹೊಣೆಗಾರಿಕೆಯನ್ನು ನೇರವಾಗಿ ಪ್ರಶ್ನಿಸಲು ಸಾಧ್ಯವಿರಲಿಲ್ಲ. ಆದರೆ, ಈಗ ಈ ಸಂಪೂರ್ಣ ನಿಯಂತ್ರಣ ವ್ಯವಸ್ಥೆಯು ಸರ್ಕಾರದ ಉಸ್ತುವಾರಿಗೆ ಒಳಪಟ್ಟಿರುವುದರಿಂದ, ಸಾರ್ವಜನಿಕರಿಗೆ ಗುಣಮಟ್ಟದ ಆಡಳಿತ ಮತ್ತು ಸೇವೆ ನೀಡುವಲ್ಲಿ ಸರ್ಕಾರದ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು
ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧ:
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಮ್ಮ ಆರೋಗ್ಯ ಸಮಸ್ಯೆಗೆ ನೆರವು ಕೇಳಿ ಬರುವ ಜನರು , ಸರ್ಕಾರದ ಧನಸಹಾಯವನ್ನು ಬಯಸುತ್ತಾರೆ. ಆದರೆ ಜನರು ಖಾಸಗಿ ಆಸ್ಪತ್ರೆಗೆ ಹೋಗಿ, ಸರ್ಕಾರದಿಂದ ಧನಸಹಾಯ ಕೇಳುವ ಬದಲು, ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯ ವ್ಯವಸ್ಥೆಯಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಆರೊಗ್ಯ ವ್ಯವಸ್ಥೆಯನ್ನು ನೀಡಲು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

