Tue. Oct 27th, 2026

ವಿಶೇಷ ಸಮಗ್ರ ಪರಿಷ್ಕರಣೆ (SIR-2026) ಅಂತಿಮ ಮತದಾರರ ಪಟ್ಟಿ ಪ್ರಕಟ: ಒಟ್ಟು 99.32 ಲಕ್ಷ ವೋಟ್ ಡಿಲೀಟ್

Share this with Friends

ಬೆಂಗಳೂರು: ರಾಜ್ಯದ ಬಹುನಿರೀಕ್ಷಿತ ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ 99.32 ಲಕ್ಷ ಅನರ್ಹ ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ (ಡಿಲೀಟ್) ಎಂದು ಅವರು ಮಾಹಿತಿ ನೀಡಿದ್ದಾರೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜೂನ್ 30 ರಿಂದ ಪ್ರಾರಂಭವಾಗಿದ್ದ ಈ ಸುದೀರ್ಘ ಪರಿಷ್ಕರಣೆ ಕಾರ್ಯವು, ಹಲವು ಹಂತದ ಕ್ಷೇತ್ರ ಪರಿಶೀಲನೆಗಳ ನಂತರ ಇಂದು ಅಂತಿಮಗೊಂಡಿದೆ. ಈ ಬಾರಿಯ ಪಟ್ಟಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಕರ್ನಾಟಕದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ ಎಂದು ವಿವರ ನೀಡಿದರು.

ರಾಜ್ಯದ ಒಟ್ಟು ಮತದಾರರ ಅಂಕಿ-ಅಂಶಗಳು:

ಒಟ್ಟು ಮತದಾರರ ಸಂಖ್ಯೆ: 4,55,00,111

ಮಹಿಳಾ ಮತದಾರರು: 2,29,14,063

ಪುರುಷ ಮತದಾರರು: 2,25,83,107

ತೃತೀಯಲಿಂಗಿ ಮತದಾರರು: 2,841

ಅರ್ಹ ಮತದಾರರ ಮರುಸೇರ್ಪಡೆಗೆ ಅವಕಾಶ:

“SIR ಪ್ರಕ್ರಿಯೆಯ ಭಾಗವಾಗಿ ಸಾರ್ವಜನಿಕರಿಂದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿ ಕಾನೂನಾತ್ಮಕವಾಗಿ ವಿಲೇವಾರಿ ಮಾಡಲಾಗಿದೆ. ಒಂದು ವೇಳೆ ನಿಯಮಾವಳಿಗಳ ಕಾರಣದಿಂದ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ಅಂತಹ ಅರ್ಹರನ್ನು ಮತ್ತೊಮ್ಮೆ ಸೇರ್ಪಡೆ ಮಾಡಲು ಆಯೋಗವು ಸದಾ ಸಿದ್ಧವಿದೆ” ಎಂದು ಸ್ಪಷ್ಟಪಡಿಸಿದರು. ಇದಕ್ಕಾಗಿ ಇಲಾಖೆಯ ವತಿಯಿಂದ ವಿಶೇಷ ಜಾಗೃತಿ ಅಭಿಯಾನ ಹಾಗೂ ನೋಂದಣಿ ಪ್ರಕ್ರಿಯೆಗಳು ಮುಂದುವರಿಯಲಿವೆ ಎಂದು ಅನ್ಬುಕುಮಾರ್ ತಿಳಿಸಿದರು.

18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ಯುವಕ-ಯುವತಿಯರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಬೂತ್ ಮಟ್ಟದ ಅಧಿಕಾರಿಗಳು (BLO) ಜಾಗೃತಿ ವಹಿಸಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್ ಅಥವಾ ಆಯೋಗದ ಆ್ಯಪ್‌ಗಳನ್ನು ಬಳಸಬಹುದು ಎಂದು ತಿಳಿಸಿದರು.

 


Share this with Friends

Related Post