Fri. Aug 21st, 2026

ಸರ್ಕಾರಿ ಶಾಲೆಗಳ ಹೈಟೆಕ್ ಉನ್ನತೀಕರಣಕ್ಕೆ ರೂ. 1,750 ಕೋಟಿ ಎಡಿಬಿ ನೆರವು: ರಾಜ್ಯ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಮಹತ್ವದ ಬೆಳವಣಿಗೆಯೊಂದರಲ್ಲಿ, ಕರ್ನಾಟಕದ 500 ಸರ್ಕಾರಿ ಶಾಲೆಗಳನ್ನು ಅತ್ಯಾಧುನಿಕ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನಾಗಿ (ಕೆಪಿಎಸ್) ಪರಿವರ್ತಿಸಲು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಭಾರಿ ಆರ್ಥಿಕ ನೆರವು ಘೋಷಿಸಿದೆ. ಈ ಬೃಹತ್ ಯೋಜನೆಗಾಗಿ ಎಡಿಬಿ ಬ್ಯಾಂಕ್ ರೂ. 1,750 ಕೋಟಿ ಧನಸಹಾಯ ನೀಡುತ್ತಿದ್ದು, ರಾಜ್ಯ ಸರ್ಕಾರ ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಇಂದು ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಪ್ರಮುಖ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಈ ಐತಿಹಾಸಿಕ ಒಪ್ಪಂದದ ಪ್ರಕ್ರಿಯೆಗಳು ಪೂರ್ಣಗೊಂಡವು. ಮುಂದಿನ 4 ವರ್ಷಗಳ ಅವಧಿಯಲ್ಲಿ, ಅಂದರೆ 2029-30ನೇ ಸಾಲಿನ ಒಳಗಾಗಿ ಒಟ್ಟು 2,500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ 500 ಮಾದರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ದಿಕ್ಸೂಚಿಯನ್ನು ಸರ್ಕಾರ ಹೊಂದಿದೆ.

ಪ್ರತಿ ಶಾಲೆಯಲ್ಲೂ 1,200 ವಿದ್ಯಾರ್ಥಿಗಳಿಗೆ ಅವಕಾಶ:

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಹಾಗೂ ಉತ್ತಮ ಮೂಲಸೌಕರ್ಯ ಹೊಂದಿರುವ ಆಯ್ದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಅವುಗಳನ್ನು ಕೆಪಿಎಸ್ ಹಂತಕ್ಕೆ ಜಾಗತಿಕ ಗುಣಮಟ್ಟದೊಂದಿಗೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ನೂತನ ಯೋಜನೆಯಡಿ ಅಭಿವೃದ್ಧಿಯಾಗುವ ಪ್ರತಿಯೊಂದು ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಹ ಅತ್ಯಾಧುನಿಕ ತರಗತಿ ಕೋಣೆಗಳು, ಪ್ರಾಯೋಗಿಕ ಪ್ರಯೋಗಾಲಯಗಳು ಹಾಗೂ ಸುಸಜ್ಜಿತ ಗ್ರಂಥಾಲಯಗಳ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ತರ ಗುರಿ ಹೊಂದಲಾಗಿದೆ.

ಉನ್ನತ ಅಧಿಕಾರಿಗಳ ಉಪಸ್ಥಿತಿ:

ಒಪ್ಪಂದಕ್ಕೆ ಸಹಿ ಹಾಕುವ ಈ ಮಹತ್ವದ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಉಪಸ್ಥಿತರಿದ್ದರು. ಇನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪರವಾಗಿ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ, ಪ್ರಿನ್ಸಿಪಲ್ ಪೋರ್ಟ್ಫೋಲಿಯೊ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ಕೈ ವೇಯ್ ಯಿಯೋ, ಹಿರಿಯ ಪ್ರಾಜೆಕ್ಟ್ ಆಫೀಸರ್ ಪೂನಂ ಎಸ್. ಭಾಂಬ್ರಿ ಹಾಗೂ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪಕಾರ್ಯದರ್ಶಿ ಸೌರಭ್ ಸಿಂಗ್ ಸೇರಿದಂತೆ ಉಭಯ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ 4 ವರ್ಷಗಳಲ್ಲಿ ಅನುಷ್ಠಾನ:

“ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್  1,750  ರೂ.ಗಳ ನೆರವು ಒದಗಿಸಲಿದೆ. ಉಳಿದ 750 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆ. ಈ ಒಪ್ಪಂದಕ್ಕೆ ಸಹಿ ಮಾಡುವುದಕ್ಕೂ ಮೊದಲೇ ನಾನು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಪ್ಪಂದವನ್ನು ಅಂತಿಮಗೊಳಿಸಿದ್ದೇನೆ” ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

“ಎಡಿಬಿ ಬ್ಯಾಂಕ್ ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿರುವುದು ಇದೇ ಮೊದಲು. ಅವರು ಈ ನೆರವು ಪ್ರಕಟಿಸುವುದಕ್ಕೂ ಮೊದಲೇ ನಮ್ಮ ಕೆಪಿಎಸ್ ಶಾಲೆಗಳ ಯೋಜನೆ, ಕಾರ್ಯಗತಗೊಳಿಸಲು ನಾವು ತೆಗೆದುಕೊಂಡಿರುವ ಕ್ರಮ, ನಮ್ಮ ಬದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೆ, ನಾವು ಗುಣಮಟ್ಟದ ಶಿಕ್ಷಣ ನೀಡಲು ತೆಗೆದುಕೊಂಡಿರುವ ಕ್ರಮ ಬ್ಯಾಂಕಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ” ಎಂದು ಸಚಿವರು ವಿವರಿಸಿದ್ದಾರೆ.

“ದ್ವಿಭಾಷಾ ಶಿಕ್ಷಣ, ಮಕ್ಕಳ ಹಾಜರಾತಿ ದಾಖಲಿಸಲು ʻನಿರಂತರʼ ಯೋಜನೆ ಜಾರಿ, ಬೃಹತ್ ಪ್ರಮಾಣದಲ್ಲಿ ಅಂದರೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ನಿರಂತರವಾಗಿ ನೀಡುತ್ತಿರುವ ತರಬೇತಿ, ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ, ಎಐ ಕಲಿಸಲು ನಾವು ನಡೆಸಿರುವ ಸಿದ್ಧತೆ, ವೃತ್ತಿ ಮತ್ತು ಕೌಶಲ ಶಿಕ್ಷಣ, ಗ್ರಾಮೀಣ ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಮ್ಮ ಯೋಜನೆ ಎಲ್ಲವೂ ಈ ಮಹತ್ವದ ಒಪ್ಪಂದ ಏರ್ಪಡಲು ಕಾರಣವಾಗಿದೆ” ಎಂದು ಸಚಿವರು ಹೇಳಿದ್ದಾರೆ.

“ಈಗಾಗಲೇ ನಾವು 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದೇವೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ ಸಚಿವರು, ಸ್ಪಷ್ಟ ಮಾನದಂಡಗಳನ್ನು ಇಟ್ಟುಕೊಂಡು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ” ಎಂದಿದ್ದಾರೆ.

“ಈಗಾಗಲೇ ಶೇ.15 ರಷ್ಟು ಅಂದರೆ 262.5 ಕೋಟಿ ರೂ.ಗಳನ್ನು ಎಡಿಬಿ ಬ್ಯಾಂಕ್ ನೆರವು  ನೀಡಿದೆ. 2026-27 ನೇ ಸಾಲಿನಲ್ಲಿ ಶೇ. 20.5 358.75 ಕೋಟಿ ನೆರವು ನೀಡಲಿದೆ. 2027-28 ನೇ ಸಾಲಿನಲ್ಲಿ ಶೇ.22 ರಷ್ಟು ಎಂದರೆ 385 ಕೋಟಿ ರೂ. ಹಾಗೂ 2028-29 ಸಾಲಿನಲ್ಲಿ ಶೇ. 21.5  ರಷ್ಟು ಎಂದರೆ 376.25 ಕೋಟಿ ರೂ. ಮತ್ತು 2029-30  ನೇ ಸಾಲಿನಲ್ಲಿ ಶೇ. 21 ರಷ್ಟು ಎಂದರೆ 367.5 ಕೋಟಿ ರೂ. ನೆರವು ನೀಡಲಿದೆ” ಎಂದು ಸಚಿವರು ವಿವರಿಸಿದ್ದಾರೆ.

 


Share this with Friends

Related Post