ಬೆಂಗಳೂರು: ಜಾಗತಿಕವಾಗಿ ಆತಂಕ ಮೂಡಿಸುತ್ತಿರುವ ಎಬೋಲಾ (Ebola) ಸೋಂಕು ರಾಜ್ಯಕ್ಕೆ ಹರಡದಂತೆ ತಡೆಯಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ.
ಭಾರತದಲ್ಲಿ ಸದ್ಯಕ್ಕೆ ಯಾವುದೇ ಪ್ರಕರಣಗಳು ಪತ್ತೆಯಾಗದಿದ್ದರೂ, ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಕೋರಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು (WHO) ಎಬೋಲಾ ಸೋಂಕನ್ನು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಘೋಷಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಈ ಕಠಿಣ ನಿರ್ಧಾರ ಕೈಗೊಂಡಿದೆ.
ಪ್ರಯಾಣಿಕರಿಗೆ ಕಡ್ಡಾಯ ನಿಯಮಗಳು:
ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ (IHR) ಪ್ರಕಾರ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕೆಳಗಿನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ:
ವಿಶೇಷ ನಿಗಾ ಹಾಗೂ ಆರೋಗ್ಯ ತಪಾಸಣೆ: ಎಬೋಲಾ ಪೀಡಿತ ದೇಶಗಳಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC), ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್‌ನಲ್ಲಿ ವಿಶೇಷ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದ್ದು, ಇದಕ್ಕೆ ಪ್ರಯಾಣಿಕರು ಕಡ್ಡಾಯವಾಗಿ ಸಹಕರಿಸಬೇಕು.
21 ದಿನಗಳ ಸ್ವಯಂ ಅವಲೋಕನ: ವಿದೇಶಿ ಪ್ರಯಾಣ ಮುಗಿಸಿ ಬಂದ ನಂತರ ಕನಿಷ್ಠ 21 ದಿನಗಳ ಕಾಲ ಪ್ರಯಾಣಿಕರು ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು. ಈ ಅವಧಿಯಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕು.
ವೈದ್ಯರ ಭೇಟಿ: ತೀವ್ರ ಜ್ವರ, ತಲೆನೋವು, ಆಯಾಸ, ವಾಂತಿ, ಭೇದಿ ಅಥವಾ ಅನಿರೀಕ್ಷಿತ ರಕ್ತಸ್ರಾವದಂತಹ ರೋಗಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೆ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಮತ್ತು ತಮ್ಮ ವಿದೇಶಿ ಪ್ರಯಾಣದ ಇತಿಹಾಸವನ್ನು (Travel History) ಸ್ಪಷ್ಟವಾಗಿ ತಿಳಿಸಬೇಕು.
ಆರೋಗ್ಯ ಇಲಾಖೆಯು ಸಂಶಯಾಸ್ಪದ ಪ್ರಕರಣಗಳ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (RGICD) ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

