ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಉಭಯ ಸದನಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ‘ನ್ಯಾಷನಲ್ ಇ-ವಿಧಾನ್ ಅಪ್ಲಿಕೇಶನ್’ (NeVA) ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ಒಪ್ಪಿಗೆ ಸೂಚಿಸಿ, ಅಧಿಕೃತ ಒಪ್ಪಂದಕ್ಕೆ (MoU) ಸಹಿ ಹಾಕಿದ್ದಾರೆ.
ಇಂದು ನಡೆದ ಮಹತ್ವದ ಸಭೆಯಲ್ಲಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಸತ್ಯಪ್ರಕಾಶ್ ಖಠಾನ ಅವರೊಂದಿಗೆ ಚರ್ಚಿಸಿದ ಸಭಾಧ್ಯಕ್ಷರು, ಸದನದ ಕಲಾಪಗಳನ್ನು ಕಾಗದ ರಹಿತವಾಗಿ (Paperless) ನಡೆಸುವ ಕುರಿತು ಸಮಾಲೋಚನೆ ನಡೆಸಿದರು.
ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ದಿನನಿತ್ಯದ ಕಲಾಪಗಳು, ಪ್ರಶ್ನೋತ್ತರಗಳು ಹಾಗೂ ವರದಿಗಳು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿವೆ. ಇದು ಆಡಳಿತದಲ್ಲಿ ಪಾರದರ್ಶಕತೆ ತರುವುದಲ್ಲದೆ, ಪರಿಸರ ಸ್ನೇಹಿ ಹೆಜ್ಜೆಯೂ ಆಗಲಿದೆ.
ಸಭೆಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಕಾರ್ಯದರ್ಶಿಗಳು ಹಾಗೂ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದು, ಯೋಜನೆಯ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಶಾಸಕರಿಗೆ ಈ ಡಿಜಿಟಲ್ ವ್ಯವಸ್ಥೆಯ ಕುರಿತು ವಿಶೇಷ ತರಬೇತಿ ನೀಡುವ ಸಾಧ್ಯತೆಯಿದೆ.

