ಬೆಂಗಳೂರು:ರಾಜ್ಯದ ನಾಗರಿಕರಿಗೆ ಸಾರ್ವಜನಿಕ ಸೇವೆಗಳು ಇನ್ನು ಮುಂದೆ ನಿಗದಿತ ಅವಧಿಯಲ್ಲಿ ಸಿಗಲಿವೆ. ಸರ್ಕಾರಿ ಕೆಲಸಗಳನ್ನು ಕಾಲಮಿತಿಯಲ್ಲಿ ಮುಗಿಸಿಕೊಡದ ಮತ್ತು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರೊಂದಿಗೆ, ಅಧಿಕಾರಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ದೂರುಗಳನ್ನು ದಾಖಲಿಸುವ ಸಾರ್ವಜನಿಕರಿಗೂ ದಂಡ ವಿಧಿಸಲು ಕಾನೂನಿಗೆ ಮಹತ್ವದ ತಿದ್ದುಪಡಿ ತರಲಾಗಿದೆ.
‘ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026’ ಅಡಿಯಲ್ಲಿ ಈ ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ವಿಳಂಬದ ಆಧಾರದ ಮೇಲೆ ದಂಡದ ಲೆಕ್ಕಾಚಾರ:
ಸಾರ್ವಜನಿಕರ ಅರ್ಜಿಗಳನ್ನು ಅಥವಾ ಮೇಲ್ಮನವಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದ ಅಧಿಕಾರಿಗಳಿಗೆ ವಿಳಂಬವಾದ ದಿನಗಳ ಆಧಾರದ ಮೇಲೆ ಗರಿಷ್ಠ ರೂ. 1,500 ವರೆಗೆ ದಂಡ ವಿಧಿಸಲಾಗುತ್ತದೆ.
1 ರಿಂದ 5 ದಿನ: ದಿನಕ್ಕೆ ರೂ. 20 ರಂತೆ (ಗರಿಷ್ಠ ರೂ. 100)
6 ರಿಂದ 10 ದಿನ: ದಿನಕ್ಕೆ ರೂ. 40 ರಂತೆ (ಗರಿಷ್ಠ ರೂ. 300)
11 ರಿಂದ 15 ದಿನ: ದಿನಕ್ಕೆ ರೂ. 60 ರಂತೆ (ಗರಿಷ್ಠ ರೂ. 600)
16 ರಿಂದ 20 ದಿನ: ದಿನಕ್ಕೆ ರೂ. 80 ರಂತೆ (ಗರಿಷ್ಠ ರೂ. 1,000)
21 ರಿಂದ 25 ದಿನ: ದಿನಕ್ಕೆ ರೂ. 100 ರಂತೆ (ಗರಿಷ್ಠ ರೂ. 1,500)
ಸೂಕ್ತ ಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದರೆ ಅಥವಾ ಅಪೂರ್ಣ ಸೇವೆ ನೀಡಿದರೂ ಸಹ ಅಧಿಕಾರಿಗಳಿಂದ ರೂ. 1,500 ವಸೂಲಿ ಮಾಡಿ ಸಂತ್ರಸ್ತ ನಾಗರಿಕರಿಗೆ ಪರಿಹಾರವಾಗಿ ನೀಡಲಾಗುತ್ತದೆ.
ಅಧಿಕಾರಿಗಳಿಗೆ ಬೆದರಿಕೆ ಹಾಕಿದರೆ ಸಾರ್ವಜನಿಕರಿಗೂ ದಂಡ!
ಸರ್ಕಾರಿ ನೌಕರರ ಮೇಲೆ ವೈಷಮ್ಯ ತೀರಿಸಿಕೊಳ್ಳಲು, ಬ್ಲ್ಯಾಕ್ಮೇಲ್ ಮಾಡಲು ಅಥವಾ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ನೀಡುವ ನಾಗರಿಕರಿಗೆ ಸರ್ಕಾರ ಬ್ರೇಕ್ ಹಾಕಿದೆ. ತನಿಖೆಯ ವೇಳೆ ದೂರು ಸುಳ್ಳು ಎಂದು ಸಾಬೀತಾದರೆ, ಅಂತಹ ಸಾರ್ವಜನಿಕರಿಗೆ ಪ್ರತಿ ಅರ್ಜಿಗೆ ರೂ. 1,500 ದಂಡ ವಿಧಿಸಲಾಗುತ್ತದೆ. ತಪ್ಪು ಮರುಕಳಿಸಿದರೆ ಮತ್ತೊಮ್ಮೆ ಅಷ್ಟೇ ದಂಡ ಬೀಳಲಿದೆ. ಈ ಮೊತ್ತವನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

