ಬೆಂಗಳೂರು: ದೀರ್ಘಾವಧಿಯ ಗೊಂದಲಗಳಿಗೆ ತೆರೆ ಎಳೆದು ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಸಚಿವ ಕೃಷ್ಣಭೈರೇಗೌಡ, ತಮ್ಮ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಾದ್ಯಂತ ಮಳೆಗಾಲದ ಸಿದ್ಧತೆಗಳಲ್ಲಿ ಕಂಡುಬಂದಿರುವ ನಿರಾಸಕ್ತಿ ಮತ್ತು ಆಮೆಗತಿಯ ಕಾಮಗಾರಿಗಳನ್ನು ಕಂಡು ಸಚಿವರು ಮುಖ್ಯ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಪ್ರಮುಖ ರಾಜಕಾಲುವೆಗಳ ಹೂಳೆತ್ತುವಿಕೆ ಮತ್ತು ನಿರ್ವಹಣಾ ಕಾರ್ಯಗಳು ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ಪ್ರಕಟಿಸಿದರು. “ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ಇಂತಹ ಸಂದರ್ಭದಲ್ಲೂ ಎಂಜಿನಿಯರ್‌ಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ಒಪ್ಪಲು ಸಾಧ್ಯವಿಲ್ಲ. ಮಳೆಯಿಂದಾಗಿ ಎಲ್ಲಾದರೂ ಅನಾಹುತ ನಡೆದು ಸಾರ್ವಜನಿಕರಿಗೆ ತೊಂದರೆಯಾದರೆ, ಸಂಬಂಧಪಟ್ಟ ವಲಯದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೊರವಲಯದ ರಸ್ತೆಗಳತ್ತ ಗಮನಹರಿಸಿ
ಬೆಂಗಳೂರಿನ ಕೇಂದ್ರ ಭಾಗಗಳಿಗೆ ಮಾತ್ರ ಸೀಮಿತವಾಗದೆ, ವೇಗವಾಗಿ ಬೆಳೆಯುತ್ತಿರುವ ಹೊರವಲಯದ ಮೂಲಸೌಕರ್ಯಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ರಸ್ತೆ ಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚಬೇಕು ಎಂದು ಆದೇಶಿಸಿದರು. ಅಲ್ಲದೆ, ಕೇವಲ ವೈಟ್-ಟಾಪಿಂಗ್ ಕಾಮಗಾರಿಗಳ ಮೇಲೆ ಅವಲಂಬಿತವಾಗದೆ ಹೊರವಲಯದ ರಸ್ತೆಗಳಿಗೆ ಪೂರ್ಣ ಪ್ರಮಾಣದ ಡಾಂಬರೀಕರಣ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಸೂಚಿಸಿದರು.
ಹಿರಿಯ ಅಧಿಕಾರಿಗಳ ಉಪಸ್ಥಿತಿ
ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಯುಕ್ತರು ಸೇರಿದಂತೆ ಜಿಬಿಎ ವ್ಯಾಪ್ತಿಯ ಐದೂ ಪಾಲಿಕೆಗಳ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್‌ಗಳು ಭಾಗವಹಿಸಿದ್ದರು. ಮುಂಬರುವ ದಿನಗಳಲ್ಲಿ ನಮ್ಮ ಮೆಟ್ರೋ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೂ ಸಚಿವರು ಪ್ರತ್ಯೇಕ ಸಭೆ ನಡೆಸಿ ನಗರದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ.

