Sat. Jul 4th, 2026

ಬೆಂಗಳೂರಿನಲ್ಲಿ ಇಂದಿನಿಂದ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’:  ಸಚಿವ ಕೃಷ್ಣ ಬೈರೇಗೌಡ

Share this with Friends

ಬೆಂಗಳೂರು: ರಾಜಧಾನಿಯ ಪಾದಚಾರಿಗಳ ಹಿತರಕ್ಷಣೆ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಜುಲೈ 1ರಿಂದ ನಗರದಾದ್ಯಂತ ಹತ್ತು ದಿನಗಳ ಕಾಲ ವಿಶೇಷ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ (Safe Footpath Campaign) ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಬರುವ ಎಲ್ಲಾ ಐದೂ ಮಹಾನಗರ ಪಾಲಿಕೆಗಳ ಒಟ್ಟು 1,000 ಕಿಲೋಮೀಟರ್ ಪ್ರಮುಖ ರಸ್ತೆ ಜಾಲದಲ್ಲಿ ಈ ಬೃಹತ್ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ 1,000 ಅಪಘಾತಗಳಲ್ಲಿ ಶೇ.30 ರಷ್ಟು ಪಾದಚಾರಿಗಳೇ ಬಲಿ!

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವರು, ಬೆಂಗಳೂರಿನಲ್ಲಿ ಸಂಭವಿಸುವ ಪ್ರತಿ 1,000 ರಸ್ತೆ ಅಪಘಾತದ ಸಾವುಗಳಲ್ಲಿ ಶೇಕಡಾ 30 ರಷ್ಟು ಪಾದಚಾರಿಗಳೇ ಆಗಿರುತ್ತಾರೆ ಎಂಬ ಆಘಾತಕಾರಿ ಅಂಕಿ-ಅಂಶವನ್ನು ಹಂಚಿಕೊಂಡಿದ್ದಾರೆ. ಪಾದಚಾರಿ ಮಾರ್ಗಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸುವುದು ನಾಗರಿಕರ ಮೂಲಭೂತ ಹಕ್ಕೇ ಹೊರತು, ಅದು ಸರ್ಕಾರದ ವಿಶೇಷ ಸವಲತ್ತಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಪೋಸ್ಟ್‌ನಲ್ಲಿ ನೆನಪಿಸಲಾಗಿದೆ.

ಯಾವೆಲ್ಲಾ ಅಡೆತಡೆಗಳ ತೆರವು?

ಅಕ್ರಮ ವಾಹನ ಪಾರ್ಕಿಂಗ್: ಫುಟ್‌ಪಾತ್‌ಗಳ ಮೇಲೆ ಅನಧಿಕೃತವಾಗಿ ನಿಲ್ಲಿಸುವ ವಾಹನಗಳನ್ನು ಕಟ್ಟುನಿಟ್ಟಾಗಿ ಟೋಯಿಂಗ್ ಮಾಡಲಾಗುತ್ತದೆ.

ವಾಣಿಜ್ಯ ವಸ್ತುಗಳ ಹಟಾವೋ: ನಡಿಗೆಯ ಹಾದಿಗೆ ಅಡ್ಡಲಾಗಿ ಇಟ್ಟಿರುವ ಅಂಗಡಿಗಳ ನಾಮಫಲಕಗಳು, ಕುರ್ಚಿಗಳು, ಮೇಜುಗಳು ಮತ್ತು ಪೆಟ್ಟಿ ಅಂಗಡಿಗಳನ್ನು (ಕಿಯೋಸ್ಕ್) ಜಪ್ತಿ ಮಾಡಲಾಗುತ್ತದೆ.

ಅಂಗಡಿ ಮುಂಗಟ್ಟುಗಳ ಅತಿಕ್ರಮಣ: ನಡಿಗೆಯ ಜಾಗವನ್ನು ಆಕ್ರಮಿಸಿಕೊಂಡಿರುವ ವಾಣಿಜ್ಯ ಮಳಿಗೆಗಳ ಚಾಚುಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯನ್ನು ಮುಕ್ತಗೊಳಿಸಲಾಗುತ್ತದೆ.

ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ

ಈ ತೆರವು ಪ್ರಕ್ರಿಯೆಯನ್ನು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ದಿಢೀರನೆ ನಡೆಸುತ್ತಿಲ್ಲ. ಕಾರ್ಯಾಚರಣೆಗೂ ಮುನ್ನ ನಿಯಮಾನುಸಾರ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ‘ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ’ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಚೌಕಟ್ಟಿನಲ್ಲೇ ಎಲ್ಲಾ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು, ಸಂಚಾರಿ ಪೊಲೀಸ್ ಸಿಬ್ಬಂದಿ ಹಾಗೂ ವಿಶೇಷ ತೆರವು ಕಾರ್ಯಪಡೆಗಳು ಜಂಟಿ ಸಮನ್ವಯದೊಂದಿಗೆ ಈ ಕೆಲಸ ನಿರ್ವಹಿಸುತ್ತಿವೆ. ಒತ್ತುವರಿ ಮುಕ್ತಗೊಳಿಸುವುದರ ಜೊತೆಗೆ, ಕಿತ್ತುಹೋಗಿರುವ ಪಾದಚಾರಿ ಕಲ್ಲುಗಳು ಮತ್ತು ಅಂಚುಗಲ್ಲುಗಳನ್ನು (ಕೆರ್ಬ್ಸ್) ಇದೇ ವೇಳೆ ದುರಸ್ತಿ ಮಾಡಲಾಗುತ್ತಿದೆ.

ಕಡಿಮೆ ದೂರದ ಪ್ರಯಾಣಕ್ಕೆ ವಾಹನ ಬಿಟ್ಟು ನಡೆದುಕೊಂಡು ಹೋಗುವುದನ್ನು ಉತ್ತೇಜಿಸುವ ‘#1KmChallenge’ ನ ಮುಂದುವರಿದ ಭಾಗವಾಗಿ ಈ ಅಭಿಯಾನ ರೂಪಿತಗೊಂಡಿದೆ. ಬೆಂಗಳೂರನ್ನು ಮತ್ತಷ್ಟು ನಡಿಗೆ-ಸ್ನೇಹಿ ಮತ್ತು ಸುರಕ್ಷಿತ ನಗರವನ್ನಾಗಿ ಮಾಡಲು ಸಾರ್ವಜನಿಕರು ರಸ್ತೆಯ ಮೇಲೆ ಕಣ್ಣಿಟ್ಟು, ಈ ಅಭಿಯಾನಕ್ಕೆ ಕೈಜೋಡಿಸುವಂತೆ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದ್ದಾರೆ.

 


Share this with Friends

Related Post