Mon. Oct 19th, 2026

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಕೊಲೆ ಬೆದರಿಕೆ: ಶಿವಮೊಗ್ಗ ಎಸ್ಪಿಗೆ ದೂರು

Share this with Friends

ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ನಿಖಿಲ್ ಅವರಿಗೆ ಅಧಿಕೃತ ದೂರು ನೀಡಿದ್ದಾರೆ. ತಮಗೂ ಹಾಗೂ ತಮ್ಮ ಕುಟುಂಬದವರಿಗೂ ತೀವ್ರ ಆತಂಕ ಎದುರಾಗಿರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ಬೆದರಿಕೆ ಹಾಕಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಚಿತ್ರಮಂದಿರದಲ್ಲಿದ್ದಾಗ ಬಂದ ಕರೆಗಳು:

ಅಕ್ಟೋಬರ್ 17ರ ಶನಿವಾರ ರಾತ್ರಿ ಈಶ್ವರಪ್ಪ ಅವರಿಗೆ ಬ್ಯಾಕ್ ಟು ಬ್ಯಾಕ್ ಎರಡು ಕರೆಗಳು ಬಂದಿದ್ದವು. ರಾತ್ರಿ 8:49ರ ಸುಮಾರಿಗೆ ರಿಜ್ವಾನ್ ಬೇಗ್ ಎಂಬ ಹೆಸರಿನಲ್ಲಿ ಮೊದಲ ಕರೆ ಬಂದಿದ್ದು, ಆ ವೇಳೆ ಈಶ್ವರಪ್ಪ ಅವರು ಕುಟುಂಬದವರೊಂದಿಗೆ ಚಿತ್ರಮಂದಿರದಲ್ಲಿದ್ದರು. ತದನಂತರ ರಾತ್ರಿ 10:49ಕ್ಕೆ ಫರಾನ್ ರಶೀದ್ ಎಂಬಾತನಿಂದ ಮತ್ತೊಂದು ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಗಳು ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿಷಯವನ್ನು ಪ್ರಸ್ತಾಪಿಸಿ, ಈಶ್ವರಪ್ಪ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುದ್ದಿಗಾರರೊಂದಿಗೆ ಈಶ್ವರಪ್ಪ ಬಿಚ್ಚಿಟ್ಟ ಆತಂಕದ ವಿವರ:

ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಕರೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. “ಶನಿವಾರ ರಾತ್ರಿ ಮೊದಲನೇ ವ್ಯಕ್ತಿ ರಿಜ್ವಾನ್ ಬೇಗ್ ಫೋನ್ ಮಾಡಿದ ತಕ್ಷಣ, ‘ನೀವು ಕೆ.ಎಸ್. ಈಶ್ವರಪ್ಪನಾ?’ ಎಂದು ಕೇಳಿದ. ನಾನು ಚಿತ್ರಮಂದಿರದಲ್ಲಿ ಕುಟುಂಬದವರ ಜೊತೆಗಿದ್ದ ಕಾರಣ ವಿಷಯ ಏನೆಂದು ಗಟ್ಟಿ ಧ್ವನಿಯಲ್ಲೇ ಪ್ರಶ್ನಿಸಿದೆ. ಅದಕ್ಕೆ ಆತ ಏನೇನೋ ಮಾತನಾಡಲು ಆರಂಭಿಸಿದ. ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದಾಗ, ‘ಪರವಾಗಿಲ್ಲ, ಕೊಡಿ’ ಎಂದು ಉಡಾಫೆಯಿಂದ ಉತ್ತರಿಸಿದ. ನಾನು ಗಟ್ಟಿಯಾಗಿ ಮಾತನಾಡಿದ್ದಕ್ಕೆ ಆತ ಮತ್ತೆ ಕರೆ ಮಾಡಲಿಲ್ಲ” ಎಂದು ವಿವರಿಸಿದರು.

“ಇನ್ನು ಎರಡನೇ ಕರೆ ಮಾಡಿದ ಫರಾನ್ ರಶೀದ್ ಎಂಬಾತ, ನಾನು ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಮಾತನಾಡಿದ್ದನ್ನು ಪ್ರಸ್ತಾಪಿಸಿ ತೀವ್ರವಾಗಿ ನಿಂದಿಸಿದ್ದಾನೆ” ಎಂದು ಈಶ್ವರಪ್ಪ ಹೇಳಿದರು.

ವಿದೇಶಿ ಕರೆಗಳಲ್ಲ, ಸ್ಥಳೀಯರದ್ದೇ ಕೃತ್ಯ:

ಬೆದರಿಕೆ ಕರೆಗಳ ಹಿನ್ನೆಲೆಯ ಕುರಿತು ಮಾತನಾಡಿದ ಅವರು, “ನನಗೆ ಈ ಹಿಂದೆಯೂ ಇಂತಹ ಪ್ರಾಣ ಬೆದರಿಕೆ ಕರೆಗಳು ಮತ್ತು ಪತ್ರಗಳು ಬಂದಿದ್ದವು. ಆ ಬಗ್ಗೆಯೂ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಅವೆಲ್ಲವೂ ಇಂಟರ್ನೆಟ್ ಅಥವಾ ವಿದೇಶಿ ನಂಬರ್‌ಗಳಿಂದ ಬಂದ ಕರೆಗಳಾಗಿದ್ದವು. ಆದರೆ ಈ ಬಾರಿ ಕರೆ ಮಾಡಿದವರ ಭಾಷೆ, ಧ್ವನಿ ಮತ್ತು ಶೈಲಿಯನ್ನು ಗಮನಿಸಿದರೆ ಇವರು ವಿದೇಶದವರಲ್ಲ, ನಮ್ಮ ದೇಶದಲ್ಲೇ, ಅದರಲ್ಲೂ ಭಾರತದಲ್ಲಿಯೇ ಇರುವವರು ಎಂದು ಬಲವಾಗಿ ಅನಿಸುತ್ತಿದೆ” ಎಂದು ಶಂಕೆ ವ್ಯಕ್ತಪಡಿಸಿದರು.

“ಒಟ್ಟು ಇಬ್ಬರು ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದು, ಇಡೀ ಕುಟುಂಬ ಆತಂಕದಲ್ಲಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಎಸ್ಪಿಯವರು ಕೂಡಲೇ ತನಿಖೆ ಆರಂಭಿಸಿ, ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ” ಎಂದು ಈಶ್ವರಪ್ಪ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 


Share this with Friends

Related Post