ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಏರಿಕೆಯಾಗಿ ಸಾರ್ವಜನಿಕರು ಕಂಗೆಟ್ಟಿರುವ ಬೆನ್ನಲ್ಲೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಪ್ರಯಾಣಿಕರ ಮೇಲೆ ಮತ್ತೊಂದು ದೊಡ್ಡ ಆರ್ಥಿಕ ಹೊರೆಯನ್ನು ಹೊರಿಸಿದೆ. ಬಸ್‌ಗಳಲ್ಲಿ ಪ್ರಯಾಣಿಕರು ಸಾಗಿಸುವ ಲಗೇಜ್‌ಗಳ (ಪ್ರಯಾಣಿಕರು ಒಯ್ಯುವ ಬ್ಯಾಗ್‌ಗಳು/ಸಾಮಗ್ರಿ) ದರವನ್ನು ಸಹ ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಸರಾಸರಿ ಶೇ. 23 ರಿಂದ ಶೇ. 35 ರಷ್ಟು ಹೆಚ್ಚಳವಾದ ಬೆನ್ನಲ್ಲೇ ಈ ನೂತನ ಆದೇಶ ಹೊರಬಿದ್ದಿರುವುದು ಸಾರ್ವಜನಿಕರ ಜೇಬಿಗೆ ಭಾರಿ ಕತ್ತರಿ ಹಾಕಿದೆ.
ಡೀಸೆಲ್ ದರ ಏರಿಕೆ, ಸಿಬ್ಬಂದಿಗಳ ವೇತನ ಪರಿಷ್ಕರಣೆ ಹಾಗೂ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಹಬ್ಬದ ಸೀಸನ್ ಮುಗಿಯುತ್ತಿದ್ದಂತೆ ಸಾರಿಗೆ ಪ್ರಯಾಣಿಕರಿಗೆ ಸಾಲು ಸಾಲು ಆಘಾತ ನೀಡುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪರಿಷ್ಕೃತ ಲಗೇಜ್ ದರ ಮತ್ತು ನಿಯಮಗಳು:
ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳಲ್ಲಿ ಪ್ರಯಾಣಿಕರು ಒಯ್ಯುವ ಗರಿಷ್ಠ 30 ಕೆಜಿವರೆಗಿನ ವೈಯಕ್ತಿಕ ಲಗೇಜ್‌ಗಳನ್ನು ಉಚಿತವಾಗಿ ಸಾಗಿಸಲು ಮುಂದುವರಿದ ಅವಕಾಶ ಕಲ್ಪಿಸಲಾಗಿದೆ. ಆದರೆ 30 ಕೆಜಿ ಮಿತಿ ಮೀರಿದ ಲಗೇಜ್‌ಗಳಿಗೆ ಪ್ರಯಾಣಿಸುವ ದೂರ ಅಥವಾ ಹಂತಗಳ (1 ಸ್ಟೇಜ್ ಅಂದರೆ 6 ಕಿಲೋಮೀಟರ್) ಆಧಾರದ ಮೇಲೆ ನೂತನ ದರಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆರಂಭಿಕ 1 ರಿಂದ 5 ಹಂತಗಳ ಪ್ರಯಾಣಕ್ಕೆ ಕನಿಷ್ಠ 6 ನಿಗದಿಪಡಿಸಲಾಗಿದ್ದು, 6 ರಿಂದ 10 ಹಂತಗಳಿಗೆ 12 ಹಾಗೂ 11 ರಿಂದ 15 ಹಂತಗಳಿಗೆ 20 ರಂತೆ ನಿಗದಿಪಡಿಸಲಾಗಿದೆ. ದೀರ್ಘಾವಧಿಯ ಪ್ರಯಾಣದ ಹಂತಗಳಿಗೆ (156-160 ಹಂತಗಳು) ಗರಿಷ್ಠ 145 ರವರೆಗೆ ದರ ನಿಗದಿಯಾಗಿದೆ.
ಬಸ್‌ಗಳಲ್ಲಿ ಸಾಗಣೆಗೆ ಅವಕಾಶವಿರುವ ಗೃಹೋಪಯೋಗಿ ವಸ್ತುಗಳು, ದಿನಸಿ ಸಾಮಗ್ರಿಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ಸಾಗಿಸುವ ವಾಣಿಜ್ಯ ಲಗೇಜ್‌ಗಳ ಸಾಗಾಟದ ಮೇಲೂ ಈ ಪರಿಷ್ಕೃತ ದರಗಳು ನೇರ ಪರಿಣಾಮ ಬೀರಲಿವೆ.
ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ:
ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಸ್‌ಗಳ ಟಿಕೆಟ್ ದರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾರ್ವಜನಿಕರು, ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ತರಕಾರಿ, ಹೂವು ಹಾಗೂ ದಿನಸಿ ಸಾಮಗ್ರಿಗಳನ್ನು ತರುವ ಸಣ್ಣ ವ್ಯಾಪಾರಿಗಳಿಗೆ ಈ ಲಗೇಜ್ ದರ ಹೆಚ್ಚಳದ ಆದೇಶವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದ್ದು, ಅದನ್ನು ಸರಿದೂಗಿಸಲು ಈ ರೀತಿ ಜನಸಾಮಾನ್ಯರನ್ನು ಲೂಟಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

