Fri. Jun 5th, 2026

ಲಾಡ್ಲೆ ಮಶಾಕ್ ದರ್ಗಾ ವಿವಾದ: ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ಪಡೆ!

Share this with Friends

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಐತಿಹಾಸಿಕ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಹಾಗೂ ಉದ್ವಿಗ್ನ ಪರಿಸ್ಥಿತಿಯ ಕುರಿತು ಬಿಜೆಪಿ ನಾಯಕರು ರಾಜಭವನದ ಕದ ತಟ್ಟಿದ್ದಾರೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರ ನೇತೃತ್ವದ ಹಿರಿಯ ಬಿಜೆಪಿ ನಾಯಕರ ಮತ್ತು ಹಿಂದೂ ಸಂಘಟನೆಗಳ ಪ್ರಮುಖರ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಲಿಖಿತ ದೂರು ನೀಡಿದೆ.

ದರ್ಗಾ ಆವರಣದಲ್ಲಿರುವ ರಾಘವಚೈತನ್ಯ ಶಿವಲಿಂಗದ ಪೂಜೆ ಹಾಗೂ ಉರುಸ್ ಆಚರಣೆಯ ಸಂದರ್ಭದಲ್ಲಿ ತಲೆದೋರಿರುವ ವಿವಾದದ ಹಿನ್ನೆಲೆಯಲ್ಲಿ ಈ ದೂರು ಸಲ್ಲಿಕೆಯಾಗಿದೆ. ಅಲ್ಲಿನ ಸ್ಥಳೀಯ ಹಿಂದೂ ಧರ್ಮೀಯರು ಮತ್ತು ಸಂಘಟನೆಗಳ ಮುಖಂಡರಿಗೆ ಪೂಜೆ ನೆರವೇರಿಸಲು ಸೂಕ್ತ ರಕ್ಷಣೆ ನೀಡುತ್ತಿಲ್ಲ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ ಸ್ಥಳೀಯ ಆಡಳಿತ ಮತ್ತು ಪೊಲೀಸರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿದೆ.

ತುರ್ತು ಹಸ್ತಕ್ಷೇಪಕ್ಕೆ ಮನವಿ:

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, “ಲಾಡ್ಲೆ ಮಶಾಕ್ ದರ್ಗಾ ವ್ಯಾಪ್ತಿಯಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸಲು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಈ ಘಟನೆಯ ಹಿಂದೆ ಇರುವ ಅಸಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಕಾನೂನು ಪಾಲಿಸುತ್ತಿಲ್ಲ, ಆದ್ದರಿಂದ ರಾಜ್ಯಪಾಲರು ತಕ್ಷಣವೇ ಹಸ್ತಕ್ಷೇಪ ಮಾಡಿ ಸೂಕ್ತ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು. ಮುಂಬರುವ ದಿನಗಳಲ್ಲಿ ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಅಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ನಿಯೋಗವು ಮನವಿಯಲ್ಲಿ ಕೋರಿದೆ.

 

 


Share this with Friends

Related Post