ಬೆಂಗಳೂರು: “ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಅತ್ಯಂತ ಮಹತ್ತರ ಹಾಗೂ ಶ್ರೇಷ್ಠ ಮಾನವೀಯ ಸೇವೆಯಾಗಿದೆ. ವಿಶೇಷವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳು ಹಾಗೂ ನಿರಂತರವಾಗಿ ರಕ್ತದ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯಾಗಿದೆ” ಎಂದು ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317 ಎ ಜಿಲ್ಲಾ ಗವರ್ನರ್ ಲಯನ್ ಈಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317 ಎ ವತಿಯಿಂದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತನಿಧಿಗೆ ಒಟ್ಟು 300 ಯೂನಿಟ್ ರಕ್ತ ಹಾಗೂ ವಿವಿಧ ರಕ್ತದ ಕಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ರಕ್ತದಾನ ಜಾಗೃತಿ ಪೋಸ್ಟರ್ ಬಿಡುಗಡೆ:
ವಿಜಯನಗರದಲ್ಲಿರುವ ಲಯನ್ಸ್ ರಕ್ತನಿಧಿ ಕೇಂದ್ರದ ಮೂಲಕ ಸಂಗ್ರಹಿಸಲಾದ ರಕ್ತ ಮತ್ತು ರಕ್ತದ ಕಣಗಳನ್ನು ಕಿದ್ವಾಯಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ರಕ್ತದಾನದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಪೋಸ್ಟರ್‌ಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಲಯನ್ ಈಶ್ವರನ್ ಅವರು, “ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತದ ಲಭ್ಯತೆಯು ಜೀವ ಉಳಿಸುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳು ಸೇರಿದಂತೆ ರೋಗಿಗಳಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದ್ದು, ಲಯನ್ಸ್ ಸಂಸ್ಥೆಯು ಇಂತಹ ಮಾನವೀಯ ಸೇವೆಗಳಿಗೆ ಮುಂದೆಯೂ ಹೆಚ್ಚಿನ ಆದ್ಯತೆ ನೀಡಲಿದೆ” ಎಂದು ತಿಳಿಸಿದರು.
ರೋಗಿಗಳ ಜೀವ ಉಳಿಸಲು ಕರೆ:
ಕಾರ್ಯಕ್ರಮದಲ್ಲಿ ಮಾತನಾಡಿದ ಲಯನ್ ಎಸ್. ಮನೋಜ್ ಕುಮಾರ್ ಅವರು, “ಆರೋಗ್ಯವಂತ ಪ್ರತಿಯೊಬ್ಬ ನಾಗರಿಕನೂ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಕೈಜೋಡಿಸಬೇಕು. ರಾಷ್ಟ್ರೀಯ ರಕ್ತದಾನ ದಿನದಂದೇ ಕಿದ್ವಾಯಿ ಆಸ್ಪತ್ರೆಗೆ 300 ಯೂನಿಟ್ ರಕ್ತದ ಕೊಡುಗೆ ನೀಡಿರುವುದು ಸಂತಸದ ಸಂಗತಿಯಾಗಿದ್ದು, ಇದು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ” ಎಂದರು.
ಈ ಮಾನವೀಯ ಸೇವಾ ಕಾರ್ಯಕ್ರಮದಲ್ಲಿ ಲಯನ್ ಎಸ್. ಮನೋಜ್ ಕುಮಾರ್, ಲಯನ್ ಎಂ.ಎಸ್. ರಾಮಕೃಷ್ಣಪ್ಪ, ಲಯನ್ ಡಾ. ಎಂ.ಎನ್. ಸತ್ಯನಾರಾಯಣ್, ಲಯನ್ ಭಾರತಿ ಆರ್.ಎಂ, ಲಯನ್ ವೆಂಕಟೇಶ್, ಲಯನ್ ಡಾ. ಬಾಲರಾಜ್ ರಾಮಸ್ವಾಮಿ, ಲಯನ್ ಡಾ. ಗುರುರಾಜ್, ಲಯನ್ ಸೋಮಶೇಖರ್ ಸೇರಿದಂತೆ ಲಯನ್ಸ್ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

