Sat. Aug 15th, 2026

ಪಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಉಚಿತ ಪಠ್ಯಪುಸ್ತಕ ವಿತರಣೆ ಆರಂಭ, 800 ಕೆಪಿಎಸ್ ಶಾಲೆಗಳಿಗೆ ಚಾಲನೆ

Share this with Friends

ಶಿವಮೊಗ್ಗ: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಸಾಲಿನಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸುವ ಮಹತ್ವದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ನಾಗರಿಕ ಬಂಧುಗಳಿಗೂ ಮತ್ತು ನಾಡಿನ ಸಮಸ್ತೆ ಜನತೆಗೂ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಮಾತನಾಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಪುಸ್ತಕ ಪೂರೈಕೆ, ಗುಣಮಟ್ಟದ ಸಮವಸ್ತ್ರ ವಿತರಣೆ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಉದ್ಘಾಟನೆ ಸೇರಿದಂತೆ ಹಲವು ಪ್ರಮುಖ ಸುಧಾರಣಾ ಕ್ರಮಗಳನ್ನು ಹಂಚಿಕೊಂಡರು.

ಕಳಪೆ ಶೂ ಪೂರೈಕೆಗೆ ಬ್ರೇಕ್: ರಾಜ್ಯಮಟ್ಟದ ಟೆಂಡರ್

ರಾಜ್ಯದ ವಿವಿಧೆಡೆ ಶಾಲಾ ಮಕ್ಕಳಿಗೆ ಸ್ಥಳೀಯವಾಗಿ ಅತ್ಯಂತ ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆದು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಏಕರೂಪದ ರಾಜ್ಯಮಟ್ಟದ ಹೊಸ ಟೆಂಡರ್ ಪ್ರಕ್ರಿಯೆಯನ್ನು ಆಹ್ವಾನಿಸಿದೆ ಎಂದು ಸಚಿವರು ವಿವರಿಸಿದರು.

ಮಕ್ಕಳಿಗೆ ನೀಡುವ ಶೂಗಳ ಅಳತೆಯಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸ್ಥಳದಲ್ಲೇ ಬದಲಾಯಿಸಿಕೊಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳಲ್ಲಿ ಯಾವುದೇ ರೀತಿಯ ವಂಚನೆ ಅಥವಾ ಕಳಪೆತನ ಕಂಡುಬಂದಲ್ಲಿ ಅಂತಹ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೂಲಸೌಕರ್ಯಕ್ಕೆ ಆದ್ಯತೆ

ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಿಗೆ ಈಗಾಗಲೇ ಅಗತ್ಯವಿರುವ ಪಠ್ಯಪುಸ್ತಕಗಳನ್ನು ಶೇ. 100 ರಷ್ಟು ಸರಬರಾಜು ಮಾಡಲಾಗಿದೆ. ಪ್ರವೇಶಾತಿ ಪ್ರಕ್ರಿಯೆಯಲ್ಲಿ ಏರಿಳಿತವಾಗಿರುವ ಶಾಲೆಗಳನ್ನು ಗುರುತಿಸಿ, ಅಲ್ಲಿಗೂ ಹೆಚ್ಚುವರಿ ಪುಸ್ತಕಗಳನ್ನು ತಕ್ಷಣವೇ ತಲುಪಿಸಲು ಇಲಾಖೆ ಮುಂದಾಗಿದೆ. ಉಚಿತ ವಿದ್ಯುತ್, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯದ ಹಾಲು ಹಾಗೂ ಮೊಟ್ಟೆ ವಿತರಣೆಯಂತಹ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಶೀಘ್ರದಲ್ಲೇ 800 ಕೆಪಿಎಸ್ ಶಾಲೆಗಳ ಆರಂಭ

ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಆರಂಭಿಸುವ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಬ್ಲೂಪ್ರಿಂಟ್‌ಗೆ ಅಧಿಕೃತ ಅನುಮೋದನೆ ಸಿಕ್ಕಿದೆ. ರಾಜ್ಯ ರಾಜಕಾರಣದಲ್ಲಿ ಉಂಟಾದ ಇತ್ತೀಚಿನ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ, ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬಜೆಟ್ ಹಂಚಿಕೆ ಹಾಗೂ ಹಣಕಾಸು ಲಭ್ಯತೆಯ ಕುರಿತು ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಹಣಕಾಸು ಇಲಾಖೆಯ ಸಮ್ಮತಿ ಸಿಗುತ್ತಿದ್ದಂತೆಯೇ ನೇರ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,“ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಮಟ್ಟದ ಕೆಪಿಎಸ್ ಉದ್ಘಾಟನಾ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿಯೇ ಆಯೋಜಿಸುವ ಉದ್ದೇಶವಿದೆ. ಜಿಲ್ಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 11 ಕೆಪಿಎಸ್ ಶಾಲೆಗಳು ನಡೆಯುತ್ತಿವೆ. ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 59 KPS ಶಾಲೆಗಳು ಜಿಲ್ಲೆಗೆ ಮಂಜೂರಾಗಿವೆ. 222 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ. ಶಾಲಾ ಕೊಠಡಿ ದುರಸ್ತಿಗೆ 319 ಲಕ್ಷ ರೂ. ಮತ್ತು ನೂತನ ಕೊಠಡಿಗಳಿಗೆ 1,180 ಲಕ್ಷ ಅನುದಾನ ಮಂಜೂರಾಗಿದೆ” ಎಂದು ತಮ್ಮ ಇಲಾಖೆಯ ಸಾಧನೆ ವಿವರಿಸಿದರು.

“ರಾಜ್ಯದಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ದೇಶದಲ್ಲೇ ಚಾರಿತ್ರಿಕ ಫಲಿತಾಂಶ ನನ್ನ ಅವಧಿಯಲ್ಲಿ ದಾಖಲಾಗಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 98.08 ಮತ್ತು ಪಿಯುಸಿಯಲ್ಲಿ 92.25 ಫಲಿತಾಂಶ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಶೇ.96.5 ಫಲಿತಾಂಶ ದಾಖಲಿಸಿದ್ದು, ಹಿಂದಿಗಿಂತ ಶೇ.14ರಷ್ಟು ಏರಿಕೆಯಾಗಿದೆ. ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆಗೆ ಇದೇ ಮೊದಲ ಬಾರಿಗೆ ಸರ್ಕಾರ ಆದೇಶಿಸಿದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ:

“ರಾಜ್ಯದ ಯುವ ಜನರ ಭದ್ರ ಭವಿಷ್ಯ ನಿರ್ಮಾಣಕ್ಕೆ ಬದ್ಧವಾಗಿರುವ ಸರ್ಕಾರ, ಮುಂದಿನ ದಿನಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಭಾಗವಾಗಿ ಸರ್ಕಾರಿ ಶಾಲೆಗಳ ಗುಣಮಟ್ಟ ಬಲಪಡಿಸಲು 15,000 ಶಿಕ್ಷಕರ ನೇರ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೇ ಯುವಕರ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಯೋಜನೆ ಜಾರಿಗೆ ಬಂದಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಬಯಸುವ ಯುವಕರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವ AI ಆಧಾರಿತ ಆಧುನಿಕ ಉದ್ಯೋಗ ವಿನಿಮಯ ವೇದಿಕೆ ಇದಾಗಿದೆ” ಎಂದು ತಿಳಿಸಿದರು.

“ವಿದ್ಯಾರ್ಥಿಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಗೆ 9 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮಂಜೂರಾಗಿದ್ದು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಕಟ್ಟಡಗಳಿಗೆ ಒಟ್ಟು 24 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮಕ್ಕಳ ಪೌಷ್ಟಿಕತೆಗೂ ಆದ್ಯತೆ ನೀಡಲಾಗುತ್ತಿದೆ. ಮೊಟ್ಟೆ, ಬಾಳೆಹಣ್ಣು ಪೌಷ್ಟಿಕ ಆಹಾರ ನೀಡುವ ಕ್ರಮಗಳು ಮಕ್ಕಳ ಆರೋಗ್ಯವನ್ನು ಬಲಪಡಿಸುತ್ತಿವೆ. ಆರೋಗ್ಯ ಕ್ಷೇತ್ರದಲ್ಲೂ ಜಿಲ್ಲೆಯಲ್ಲಿ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ. ಮಂಗನ ಕಾಯಿಲೆ ನಿಯಂತ್ರಣಕ್ಕೆ ಲಸಿಕೆ ಸಂಶೋಧನೆಗೆ ಕ್ರಮ ಕೈಗೊಳ್ಳಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ” ಎಂದರು.

 


Share this with Friends

Related Post