Sat. Jun 6th, 2026

ಮೆಜೆಸ್ಟಿಕ್ ಬಸ್ ನಿಲ್ದಾಣದ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ: ನೂತನ ಆವರಣ ಉದ್ಘಾಟಿಸಿದ ಸಚಿವ ರಾಮಲಿಂಗಾರೆಡ್ಡಿ

Share this with Friends

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಟರ್ಮಿನಲ್-1 ರಲ್ಲಿ ದೀರ್ಘಕಾಲದಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಕಾಡುತ್ತಿದ್ದ ಪಾರ್ಕಿಂಗ್ ಸಮಸ್ಯೆಗೆ ಈಗ ಅಧಿಕೃತವಾಗಿ ತೆರೆಬಿದ್ದಿದೆ. ಸುಮಾರು ರೂ. 3.29 ಕೋಟಿ ವೆಚ್ಚದಲ್ಲಿ ಪುನರ್‌ ಅಭಿವೃದ್ಧಿಗೊಂಡಿರುವ ಪಾರ್ಕಿಂಗ್ ಪ್ರದೇಶವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಇಂದು ಲೋಕಾರ್ಪಣೆಗೊಳಿಸಿದರು.

ಈ ಹಿಂದೆ ಈ ಜಾಗವು ತಗ್ಗು-ಗುಂಡಿಗಳಿಂದ ಕೂಡಿದ್ದು, ಮಳೆಯಾದಾಗ ನೀರು ನಿಂತು ಸಾರ್ವಜನಿಕರಿಗೆ ಹಾಗೂ ಸಾರಿಗೆ ಸಿಬ್ಬಂದಿಗೆ ಬಹಳ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದೀಗ 2.5 ಎಕರೆ ವಿಸ್ತೀರ್ಣದ ಈ ಪ್ರದೇಶವನ್ನು ಸಂಪೂರ್ಣವಾಗಿ ಸಮತಟ್ಟುಗೊಳಿಸಿ, ಆಧುನಿಕ ವಿದ್ಯುತ್ ದೀಪಗಳ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಸುಮಾರು 100 ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, “ಪ್ರಯಾಣಿಕರಿಗೆ ಹಾಗೂ ಚಾಲಕ-ನಿರ್ವಾಹಕರಿಗೆ ಆಗುತ್ತಿದ್ದ ಅನಾನುಕೂಲತೆಯನ್ನು ಮನಗಂಡು ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ‘ಪ್ರಾಜೆಕ್ಟ್ ಮೆಜೆಸ್ಟಿಕ್’ ನಮ್ಮ ಸರ್ಕಾರದ ಗುರಿಯಾಗಿದೆ. ಕೇವಲ ಬಸ್ ನಿಲ್ದಾಣ ಮಾತ್ರವಲ್ಲದೆ, ಇಲ್ಲಿ ಆಧುನಿಕ ಮೂಲಸೌಕರ್ಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ ಇದನ್ನು ಒಂದು ಸಮಗ್ರ ಸಾರಿಗೆ ಹಬ್ ಆಗಿ ಪರಿವರ್ತಿಸಲಾಗುವುದು” ಎಂದು ಭರವಸೆ ನೀಡಿದರು.

ಸಂಸ್ಥೆಗಳಿಗೆ ಅನುಕೂಲ:

ಮುಖ್ಯವಾಗಿ ವಾಯುವ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಈ ನೂತನ ಪಾರ್ಕಿಂಗ್ ಆವರಣದಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಬಸ್ ನಿಲ್ದಾಣದ ಆವರಣದಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಈ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

 


Share this with Friends

Related Post