ಬೆಂಗಳೂರು: ಆನೇಕಲ್ ತಾಲೂಕಿನ ಜಲಮೂಲಗಳ ಒಡಲು ಸೇರುತ್ತಿರುವ ಕೈಗಾರಿಕಾ ವಿಷಕಾರಿ ತ್ಯಾಜ್ಯಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ ಶಿವಣ್ಣ ಅವರೊಂದಿಗೆ ಚಂದಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಕೆರೆಗಳಿಗೆ ಬುಧವಾರ (ಸೆಪ್ಟೆಂಬರ್ 30, 2026) ದಿಢೀರ್ ಭೇಟಿ ನೀಡಿ, ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಮಾಲಿನ್ಯದ ವಿರುದ್ಧ ಸಮರ ಸಾರಿರುವ ಸಚಿವರು, ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ವಲಯಗಳಿಂದ ಸಂಸ್ಕರಿಸದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಹಾಗೂ ಸ್ಥಳೀಯ ಪುರಸಭೆ, ನಗರಸಭೆ ವ್ಯಾಪ್ತಿಯ ಒಳಚರಂಡಿ ನೀರು ಜಲಮೂಲಗಳನ್ನು ಸೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಚಂದಾಪುರ, ರಾಮಕೃಷ್ಣಾಪುರ, ಹೆನ್ನಾಗರ, ಹೀಲಲಿಗೆ ಮತ್ತು ಮುತ್ತಾನಲ್ಲೂರು ಕೆರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಕೆರೆಗಳ ದುಃಸ್ಥಿತಿಯನ್ನು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ಸಂಸ್ಕರಿಸದ ನೀರನ್ನು ನೈಸರ್ಗಿಕ ಜಲಮೂಲಗಳಿಗೆ ಬಿಡಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಸಚಿವರು ನೀಡಿದ ಪ್ರಮುಖ ನಿರ್ದೇಶನಗಳು:
ಎನ್‌ಜಿಟಿ ನಿಯಮಗಳ ಜಾರಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಮಾರ್ಗಸೂಚಿಗಳು ಹಾಗೂ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಮ ಉಲ್ಲಂಘಿಸುವ ಕೈಗಾರಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ಸಮಯಬದ್ಧ ನೀರು ಸಂಸ್ಕರಣಾ ಘಟಕ: ಕೈಗಾರಿಕಾ ತ್ಯಾಜ್ಯ ಶುದ್ಧೀಕರಣಕ್ಕಾಗಿ ನಿರ್ಮಾಣ ಹಂತದಲ್ಲಿರುವ ನಾಲ್ಕು ಪ್ರಮುಖ ನೀರು ಸಂಸ್ಕರಣಾ ಘಟಕಗಳ (STP/ETP) ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಕಾರ್ಯಾಚರಣೆಗೆ ತರಲು ನಗರಸಭೆ ಹಾಗೂ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಕಾಲಮಿತಿಯ ಕಾರ್ಯಯೋಜನೆ ರೂಪಿಸಲು ಆದೇಶಿಸಿದರು.
ವಿಶೇಷ ಮೇಲ್ವಿಚಾರಣಾ ತಂಡ ರಚನೆ: ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಕೈಗಾರಿಕಾ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಹೊರಹಾಕುವ ಜಾಗಗಳ ಮೇಲೆ ನಿರಂತರ ನಿಗಾ ಇಡಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ವಿಶೇಷ ಮೇಲ್ವಿಚಾರಣಾ ತಂಡ’ಗಳನ್ನು ರಚಿಸಲು ಸೂಚನೆ ನೀಡಲಾಗಿದೆ.
“ಪರಿಸರ ಕಲುಷಿತಗೊಳಿಸಿದರೆ ಮುಲಾಜಿಲ್ಲ”:
ಪರಿಶೀಲನೆ ವೇಳೆ ಸ್ಥಳೀಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಅಹವಾಲು ಆಲಿಸಿದ ಸಚಿವ ರಾಮಲಿಂಗಾರೆಡ್ಡಿ, “ನಮ್ಮ ಕೆರೆಗಳು ಕೇವಲ ಪರಿಸರವಲ್ಲ, ಜನರ ಜೀವನ ಮತ್ತು ಆರೋಗ್ಯದ ಆಧಾರ ಸ್ತಂಭಗಳು. ಕೈಗಾರಿಕೆಗಳು ತ್ಯಾಜ್ಯವನ್ನು ಕಡ್ಡಾಯವಾಗಿ ಸಂಸ್ಕರಿಸಿದ ನಂತರವೇ ಹೊರಬಿಡಬೇಕು, ಇಲ್ಲದಿದ್ದರೆ ಕಠಿಣ ಕಾನೂನು ಶಿಕ್ಷೆ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಐಎಫ್‌ಎಸ್ ಅಧಿಕಾರಿಗಳಾದ ಆರ್. ಗೋಕೂಲ್, ಶ್ರೀನಿವಾಸುಲು, ಕೆಎಎಸ್ ಅಧಿಕಾರಿ ಕ್ಯಾಪ್ಟನ್ ಸಂತೋಷ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

