Thu. Nov 26th, 2026

“ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ” ಎಂದ ಸಚಿವ ಯು.ಟಿ. ಖಾದರ್; ವಿವಾದ ಬೆನ್ನಲ್ಲೇ ಸಿಎಂ ಡಿಕೆಶಿ ಸ್ಪಷ್ಟನೆ

Share this with Friends

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಸಚಿವ ಯು.ಟಿ. ಖಾದರ್ ಹೇಳಿದ್ದೇನು?

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಆಶಾ ಕಾರ್ಯಕರ್ತೆಯರ ಧೋರಣೆ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. “ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದ ಹಳ್ಳಿಗಳಲ್ಲಿ ಅಥವಾ ಆರೋಗ್ಯ ಇಲಾಖೆಯಲ್ಲಿ ಏನಾದರೂ ಸಮಸ್ಯೆಯಾಗಿದೆಯೇ? ಹೆರಿಗೆ ಸೇರಿದಂತೆ ಎಲ್ಲಾ ಸೇವೆಗಳು ಎಂದಿನಂತೆ ನಡೆಯುತ್ತಿವೆ. ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆಶಾಗಳು ಇಲ್ಲದಿದ್ದರೆ ವೈದ್ಯರು ಮತ್ತು ನರ್ಸ್‌ಗಳು ಇಲ್ಲವೇ?” ಎಂದು ಪ್ರಶ್ನಿಸುವ ಮೂಲಕ ಖಾದರ್ ಬೇಸರ ಹೊರಹಾಕಿದ್ದರು.

ಇದಕ್ಕೂ ಮುನ್ನ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ನೀಡಿದ್ದ ಹೇಳಿಕೆಯೂ ಆಶಾ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಪರಿಸ್ಥಿತಿ ತಿಳಿಗೊಳಿಸಲು ಸಿಎಂ ಡಿಕೆಶಿ ಯತ್ನ:

ಸಚಿವರ ಹೇಳಿಕೆಗಳಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ. “ಆಶಾ ಕಾರ್ಯಕರ್ತೆಯರು ಬೇಡ ಎಂಬುದೆಲ್ಲ ಸುಳ್ಳು, ನಮಗೆ ಎಲ್ಲರೂ ಬೇಕು. ಸಚಿವರಾದ ಖಾದರ್ ಮತ್ತು ನರೇಂದ್ರಸ್ವಾಮಿ ಯಾವ ದೃಷ್ಟಿಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಮನವಿ ಮಾಡುತ್ತಿದ್ದೇನೆ; ದಯವಿಟ್ಟು ಪ್ರತಿಷ್ಠೆ ಬಿಟ್ಟು ಧರಣಿ ಹಿಂಪಡೆಯಿರಿ. ನಾನು ನಿಮ್ಮನ್ನು ಕೂರಿಸಿಕೊಂಡು ಮಾತನಾಡುತ್ತೇನೆ” ಎಂದು ಭರವಸೆ ನೀಡಿದರು.

ಸಮಸ್ಯೆ ಬಗೆಹರಿಸುವ ಭರವಸೆ:

“ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಐದಾರು ಸುತ್ತಿನ ಚರ್ಚೆ ನಡೆಸಿದ್ದೇನೆ. ಇಂದು ಸಂಜೆಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಹೆಣ್ಣು ಕುಟುಂಬದ ಕಣ್ಣು ಎಂಬ ಅರಿವು ನನಗಿದೆ. ಬೇರೆಯವರ ರಾಜಕೀಯ ಮಾತುಗಳಿಗೆ ಕಿವಿಗೊಡಬೇಡಿ, ತಾಳ್ಮೆಯಿಂದ ಪ್ರತಿಭಟನೆ ವಾಪಸ್ ಪಡೆದರೆ ಖಂಡಿತವಾಗಿಯೂ ಪರಿಹಾರ ಒದಗಿಸುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

 


Share this with Friends

Related Post