ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡುವ ಮಹತ್ವದ ನಿರ್ಧಾರದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು (SHLCC) ಒಟ್ಟು 18,430.44 ಕೋಟಿ ರೂಪಾಯಿ ಮೌಲ್ಯದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಬೃಹತ್ ಹೂಡಿಕೆಯು ರಾಜ್ಯಾದ್ಯಂತ ಸುಮಾರು 15,032 ಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಸಮಿತಿಯ 67ನೇ ಸಭೆಯಲ್ಲಿ ಒಟ್ಟು 17 ಪ್ರಸ್ತಾವನೆಗಳನ್ನು ಪುರಸ್ಕರಿಸಲಾಗಿದೆ. ಈ ಪೈಕಿ 11 ಸಂಪೂರ್ಣ ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಾಗಿದ್ದರೆ, ಉಳಿದ 6 ಪ್ರಸ್ತಾವನೆಗಳು ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮಗಳ ವಿಸ್ತರಣೆ ಅಥವಾ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಸಂಬಂಧಿಸಿವೆ. ಈ ಯೋಜನೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಪ್ರಾದೇಶಿಕ ಅಭಿವೃದ್ಧಿಗೆ ಪೂರಕವಾಗಲಿವೆ.
ಹೊಸದಾಗಿ ಅನುಮೋದನೆ ಪಡೆದ 11 ಪ್ರಸ್ತಾವನೆಗಳಿಂದ ರಾಜ್ಯಕ್ಕೆ 14,906.9 ಕೋಟಿ ರೂಪಾಯಿ ಬಂಡವಾಳ ಹರಿದುಬರಲಿದ್ದು, ಇದರಿಂದ ಅಂದಾಜು 13,050 ಉದ್ಯೋಗಗಳು ಸೃಷ್ಠಿಯಾಗಲಿವೆ. ಇನ್ನುಳಿದ 6 ವಿಸ್ತರಣಾ ಯೋಜನೆಗಳ ಮೂಲಕ 3,523.54 ಕೋಟಿ ರೂಪಾಯಿ ಹೂಡಿಕೆಯಾಗಲಿದ್ದು, ಸುಮಾರು 1,982 ಜನರಿಗೆ ಕೆಲಸದ ಅವಕಾಶಗಳು ಲಭ್ಯವಾಗಲಿವೆ ಎಂದು ಸಭೆಯ ಬಳಿಕ ಮಾಹಿತಿ ನೀಡಲಾಯಿತು.
ಈ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಮತ್ತು ಎನ್. ಚಲುವರಾಯಸ್ವಾಮಿ ಅವರು ಉಪಸ್ಥಿತರಿದ್ದರು. ಅಲ್ಲದೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಕೈಗಾರಿಕೆ, ವಾಣಿಜ್ಯ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಯೋಜನೆಗಳ ಕುರಿತು ಚರ್ಚಿಸಿದರು.

