Sat. Jun 6th, 2026

ವಿರೋಧ ಪಕ್ಷದ ನಾಯಕನಿಗೆ ಸಿಗದ ಸರ್ಕಾರಿ ಬಂಗಲೆ: ಮನೆ ಬಾಡಿಗೆ ಭತ್ಯೆ ನಿಲ್ಲಿಸಿ ಆರ್. ಅಶೋಕ್ ಪ್ರತಿಭಟನೆ

Share this with Friends

ಬೆಂಗಳೂರು: ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ ನಿಯಮಾನುಸಾರ ಸಿಗಬೇಕಾದ ಅಧಿಕೃತ ಸರ್ಕಾರಿ ವಸತಿ ಗೃಹವು ಇನ್ನು ಕೂಡ ಹಂಚಿಕೆಯಾಗಿಲ್ಲ. ಸರ್ಕಾರದ ಈ ವಿಳಂಬ ನೀತಿಯನ್ನು ಖಂಡಿಸಿರುವ ಅವರು, ತಮಗೆ ಸಿಗುತ್ತಿದ್ದ ಮಾಸಿಕ ಮನೆ ಬಾಡಿಗೆ ಭತ್ಯೆಯನ್ನು ನಿರಾಕರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅಧಿಕೃತ ಪತ್ರ ಬರೆದಿರುವ ಅಶೋಕ್ ಅವರು, ತಮಗೆ ನಿಗದಿತ ಸರ್ಕಾರಿ ನಿವಾಸವನ್ನು ತಕ್ಷಣವೇ ಹಂಚಿಕೆ ಮಾಡುವಂತೆ ಆಗ್ರಹಿಸಿದ್ದಾರೆ.

ತಾವು ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ತಕ್ಷಣದಿಂದಲೇ ಬಂಗಲೆ ಹಂಚಿಕೆಗಾಗಿ ಸರ್ಕಾರಕ್ಕೆ ಸತತವಾಗಿ ಪತ್ರ ಬರೆಯುತ್ತಾ ಬಂದಿರುವುದಾಗಿ ಅಶೋಕ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ನವೆಂಬರ್ 2023 ರಿಂದ ಏಪ್ರಿಲ್ 2026 ರವರೆಗೆ ಒಟ್ಟು ನಾಲ್ಕು ಬಾರಿ ಅಧಿಕೃತವಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಉದಾಸೀನ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇದರ ವಿರುದ್ಧ ಪ್ರತಿಭಟನೆಯಾಗಿ 2026ರ ಏಪ್ರಿಲ್ ತಿಂಗಳಿನಿಂದ ತಮಗೆ ಬರಬೇಕಾದ ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು, ತಮ್ಮ ಆದ್ಯತೆಯ ಮೇರೆಗೆ ಬೆಂಗಳೂರಿನಲ್ಲಿ ಖಾಲಿ ಇರುವ ಮೂರು ಪ್ರಮುಖ ನಿವಾಸಗಳ ವಿವರಗಳನ್ನು ಪತ್ರದಲ್ಲಿ ನೀಡಿದ್ದಾರೆ. ಬೆಂಗಳೂರಿನ ಕುಮಾರ ಕೃಪಾ ಪೂರ್ವದ ನಂ. 01 ನಿವಾಸ ಅಥವಾ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್‌ನ ನಂ. 01 ಮತ್ತು ನಂ. 02 ನಿವಾಸಗಳಲ್ಲಿ ಯಾವುದಾದರೂ ಒಂದನ್ನು ತಮಗೆ ತಕ್ಷಣವೇ ಹಂಚಿಕೆ ಮಾಡಬೇಕು ಎಂದು ಕೋರಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಾನೂನುಬದ್ಧವಾಗಿ ಸಿಗಬೇಕಾದ ನಿವಾಸವನ್ನು ಇನ್ನಾದರೂ ವಿಳಂಬ ಮಾಡದೆ ತಕ್ಷಣವೇ ಒದಗಿಸಬೇಕು ಎಂದು ಅವರು ಮುಖ್ಯ ಕಾರ್ಯದರ್ಶಿಯವರನ್ನು ಒತ್ತಾಯಿಸಿದ್ದಾರೆ.

 


Share this with Friends

Related Post