ಬಲೂಚಿಸ್ತಾನ.ಮಾ.26 : ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ದೇಶದ ಎರಡನೇ ಅತಿದೊಡ್ಡ ನೌಕಾಪಡೆಯ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆ ಮಾಡಿವೆ. ವಿರಳ ಜನಸಂಖ್ಯೆಯ ಪ್ರಾಂತ್ಯದ ಪ್ರಕ್ಷುಬ್ಧ ಜಿಲ್ಲೆ ಟರ್ಬತ್‌ನಲ್ಲಿ ನಿನ್ನೆ ಸೋಮವಾರ ರಾತ್ರಿ ದಾಳಿ ನಡೆದಿದೆ.
ದೇಶದ ಅತಿದೊಡ್ಡ ನೌಕಾ ವಾಯು ನಿಲ್ದಾಣಗಳಲ್ಲಿ ಒಂದಾಗಿರುವ ಪಿಎನ್‌ಎಸ್ ಸಿದ್ದಿಕ್ ನೌಕಾ ವಾಯುನೆಲೆಯಲ್ಲಿ ಭದ್ರತಾ ಪಡೆಗಳು ಸಶಸ್ತ್ರ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿವೆ ಎಂದು ಮಕ್ರನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ತಿಳಿಸಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಭಯೋತ್ಪಾದಕರು ಟರ್ಬತ್‌ನಲ್ಲಿರುವ ಪಾಕಿಸ್ತಾನದ ನೌಕಾ ಕೇಂದ್ರ ಪಿಎನ್‌ಎಸ್ ಸಿದ್ದಿಕಿ ಮೇಲೆ ದಾಳಿ ನಡೆಸಿದ್ದಾರೆ.
ರಾತ್ರಿಯಿಡೀ ಗುಂಡಿನ ಸದ್ದು ಮತ್ತು ಸ್ಫೋಟದ ಸದ್ದು ಕೇಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ಭಯೋತ್ಪಾದಕರು ಹತರಾಗಿದ್ದಾರೆ. ಅವರು ವಾಯುನೆಲೆಯಲ್ಲಿ ಅಥವಾ ವಿಮಾನಗಳಿಗೆ ಯಾವುದೇ ಹಾನಿಯನ್ನುಂಟುಮಾಡಲು ಸಾಧ್ಯವಾಗಲಿಲ್ಲ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾರ್ಚ್ 24 ರಂದು, ಗ್ವಾದರ್ ಪೋರ್ಟ್ ಅಥಾರಿಟಿ ಕಾಂಪ್ಲೆಕ್ಸ್ ಮೇಲಿನ ದಾಳಿಯ ಹೊಣೆಗಾರಿಕೆಯನ್ನು BLA ಸಹ ವಹಿಸಿಕೊಂಡಿದೆ. ಭದ್ರತಾ ಪಡೆಗಳು ಗುಂಡಿನ ದಾಳಿಯಲ್ಲಿ ನಿಷೇಧಿತ ಪ್ರತ್ಯೇಕತಾವಾದಿ ಗುಂಪಿನ ಎಂಟು ಉಗ್ರರನ್ನು ಹತ್ಯೆಗೈದಿದ್ದವು.
ಆತ್ಮಾಹುತಿ ದಾಳಿಗೆ ಐವರು ಚೀನಿಯರ ಸಾವು :
ಬಲೂಚ್ ಬಂಡುಕೋರರು ಪಾಕಿಸ್ತಾನ ವಾಯುನೆಲೆ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಇದೀಗ ಖೈಬರ್ ಪಖ್ತಾಂಕ್ವಾ ಪ್ರಾಂತ್ಯದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಖೈಬರ್ ಪಖ್ತಾಂಕ್ವಾ ಪ್ರಾಂತ್ಯದಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಚೀನಾ ಮೂಲದ ಎಂಜಿನೀಯರ್ಸ್ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ವಾಹನದಲ್ಲಿದ್ದ ಐವರು ಚೀನಾ ಎಂಜಿನೀಯರ್ಸ್ ಹಾಗೂ ಓರ್ವ ಪಾಕಿಸ್ತಾನಿ ಹತ್ಯೆಯಾಗಿದ್ದಾರೆ.
ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ಹಲವು ಕಾಮಾಗಾರಿ ನಡೆಸುತ್ತಿದೆ. ಪ್ರಮುಖವಾಗಿ ಭಾರತದ ಗಡಿ ಮೂಲಕ ಸಾಗುತ್ತಿರುವ ಹೆದ್ದಾರಿ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳು ಆರಂಭಿಸಿದೆ. ಇದಕ್ಕೆ ಚೀನಾ ಮೂಲದ ಎಂಜಿನೀಯರ್ಸ್ ಸೇರಿದಂತೆ ಹಲವು ಸಿಬ್ಬಂದಿಗಳು ಪಾಕಿಸ್ತಾನದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಇದೇ ಚೀನಾ ಎಂಜಿನೀಯರ್ಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಚೀನಾ ಕೆರಳಿ ಕೆಂಡವಾಗಿದೆ.