Sat. Jun 6th, 2026

ತಂತ್ರಜ್ಞಾನದ ಜಾಗತಿಕ ನಾಯಕನಾಗಿ ಭಾರತದ ಉಗಮ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share this with Friends

ಬೆಂಗಳೂರು: “ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಕೇವಲ ತಂತ್ರಜ್ಞಾನದ ಗ್ರಾಹಕ ದೇಶವಾಗಿ ಉಳಿದಿಲ್ಲ. ಬದಲಿಗೆ ವಿಶ್ವ ಎದುರಿಸುತ್ತಿರುವ ನಾನಾ ಸವಾಲುಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಪರಿಹಾರಗಳನ್ನು ಒದಗಿಸುವ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ನಾವೀನ್ಯತೆಯ ದಶಕವನ್ನು ಸಬಲೀಕರಣಗೊಳಿಸುವುದು’ ಎಂಬ ವಿಷಯಾಧಾರಿತ ‘ಪ್ಯಾನ್ ಐಐಟಿ ಬೆಂಗಳೂರು ಶೃಂಗಸಭೆ-2026’ ಅನ್ನು ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಈ ದಶಕವನ್ನು ನಾವೀನ್ಯತೆಯ ದಶಕವನ್ನಾಗಿ ರೂಪಿಸಲು ಆಯ್ದುಕೊಂಡಿರುವ ವಿಷಯವು ಅತ್ಯಂತ ಸೂಕ್ತ ಹಾಗೂ ಕಾಲೋಚಿತವಾಗಿದೆ. ಇದು 2047ರ ವೇಳೆಗೆ ಭಾರತವನ್ನು ಜಾಗತಿಕ ಮಟ್ಟದ ಮುಂಚೂಣಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮಹತ್ತರವಾದ ಬಲ ತುಂಬಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಐಐಟಿ ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ:

ದೇಶದ ಸಿಲಿಕಾನ್ ವ್ಯಾಲಿ ಎಂದೇ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರು ಕೇವಲ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದ ಕೇಂದ್ರವಾಗಿ ಮಾತ್ರ ಸೀಮಿತವಾಗಿಲ್ಲ. ಇದು ಭಾರತದ ನಾವೀನ್ಯತೆ, ಉನ್ನತ ಸಂಶೋಧನೆ ಹಾಗೂ ನವೋದ್ಯಮ (ಸ್ಟಾರ್ಟ್‌ಅಪ್) ಸಂಸ್ಕೃತಿಯ ಹೆಮ್ಮೆಯ ತವರೂರಾಗಿದೆ. ಇಲ್ಲಿನ ಶೈಕ್ಷಣಿಕ ವಲಯ, ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಇರುವ ಜಂಟಿ ಸಮನ್ವಯತೆಯು ಇಡೀ ದೇಶಕ್ಕೇ ಅತ್ಯುತ್ತಮ ಮಾದರಿಯಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಬೌದ್ಧಿಕ ಪರಾಕ್ರಮ ಮತ್ತು ಸಾಮರ್ಥ್ಯವನ್ನು ಪಸರಿಸುವಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IIT) ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ ಎಂದು ರಾಜ್ಯಪಾಲರು ಮುಕ್ತಕಂಠದಿಂದ ಶ್ಲಾಘಿಸಿದರು.

ಕೊನೆಯ ವ್ಯಕ್ತಿಗೂ ತಂತ್ರಜ್ಞಾನ ತಲುಪಲಿ:

ಮುಂಬರುವ ದಿನಗಳಲ್ಲಿ ಸಂಶೋಧನೆಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ ಸಮಾಜ ಮತ್ತು ಕೈಗಾರಿಕೆಗಳು ಎದುರಿಸುತ್ತಿರುವ ನೈಜ ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ನೇರ ಪರಿಹಾರ ನೀಡುವಂತಾಗಬೇಕು. ಶಿಕ್ಷಣ ಸಂಸ್ಥೆಗಳು, ಉದ್ಯಮಗಳು, ಸರ್ಕಾರ ಮತ್ತು ನವೋದ್ಯಮಗಳ ನಡುವೆ ಇನ್ನಷ್ಟು ಬಲವಾದ ಸಹಯೋಗದ ಅಗತ್ಯವಿದೆ. ಅತ್ಯಾಧುನಿಕ ತಂತ್ರಜ್ಞಾನದ ನೈಜ ಲಾಭಗಳು ಸಮಾಜದ ಕೊನೆಯ ವ್ಯಕ್ತಿಗೂ, ಗ್ರಾಮೀಣ ಭಾಗದ ಹಳ್ಳಿಗಳಿಗೂ ಮತ್ತು ಅನ್ನದಾತ ರೈತರಿಗೂ ಸುಲಭವಾಗಿ ತಲುಪಬೇಕು. ತಂತ್ರಜ್ಞಾನವು ಮಾನವೀಯತೆಯ ಸೇವೆಗೆ ಬಳಕೆಯಾದಾಗ ಮಾತ್ರ ಅದು ರಾಷ್ಟ್ರ ನಿರ್ಮಾಣದ ನಿಜವಾದ ಸಾಧನವಾಗುತ್ತದೆ. ಕೃತಕ ಬುದ್ಧಿಮತ್ತೆ (AI) ಮತ್ತು ಉದಯೋನ್ಮುಖ ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿ ವೈಜ್ಞಾನಿಕ ಪ್ರಗತಿಯೊಂದಿಗೆ ನೈತಿಕ ಮೌಲ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಪ್ರಮುಖ ಸಲಹೆ ನೀಡಿದರು

“ಸ್ಟಾರ್ಟ್ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳಿಂದಾಗಿ ಭಾರತವು ಇಂದು ವಿಶ್ವದಲ್ಲೇ 3ನೇ ಅತಿ ದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ಇಂದಿನ ಯುವಕರು ಉದ್ಯೋಗ ಹುಡುಕುವವರಾಗುವ ಬದಲಿಗೆ, ಉದ್ಯೋಗ ನೀಡುವ ಉದ್ಯಮಿಗಳಾಗುತ್ತಿದ್ದಾರೆ. ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದರೆ ಭಾರತ ವಿಶ್ವಗುರುವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಸ್ವಾಮಿ ವಿವೇಕಾನಂದರ ‘ಎದ್ದೇಳಿ, ಎಚ್ಚರಗೊಳ್ಳಿ, ಗುರಿ ತಲುಪುವ ತನಕ ನಿಲ್ಲದಿರಿ’ ಎಂಬ ಸಂದೇಶ ನೀಡಿದ್ದಾರೆ. ದೇಶದ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ದೊಡ್ಡ ಕನಸು ಕಂಡು, ಸವಾಲುಗಳನ್ನು ಎದುರಿಸಿ ರಾಷ್ಟ್ರ ಸೇವೆಗೆ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್‌, ರಾಜ್ಯ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಪ್ಯಾನ್‌ ಐಐಟಿ ಅಲುಮ್ನಿ ಇಂಡಿಯಾ ಅಧ್ಯಕ್ಷ ಪ್ರಭಾತ್‌ ಕುಮಾರ್‌, ಎಎನ್‌ಆರ್‌ಎಫ್‌ನ ಸಿಇಒ ಶಿವಕುಮಾರ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ, ಪ್ಯಾನ್‌ ಐಐಟಿ ಬೆಂಗಳೂರು ಶೃಂಗಸಭೆ ಅಧ್ಯಕ್ಷ ನೀರಜ್‌ ಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.


Share this with Friends

Related Post