Sat. Jun 6th, 2026

ನ್ಯಾಯವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ

Share this with Friends

ಮೈಸೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ. ಈ ನಿಟ್ಟಿನಲ್ಲಿ ನ್ಯಾಯವಿತರಣೆ ಮಾಡುವಾಗ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ನಡೆದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ ಮತ್ತು ಮಾನವೀಯತೆ ಅತ್ಯಂತ ಮುಖ್ಯ. ಸಮಾಜದಲ್ಲಿನ ದೀನದಲಿತರು, ಅಶಕ್ತರು ಹಾಗೂ ಮಹಿಳೆಯರ ರಕ್ಷಣೆ ಮಾಡುವುದು ಇಲಾಖೆಯ ಆದ್ಯತೆಯಾಗಬೇಕು. “ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡುವಂತಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ” ಎಂಬ ಮಹಾತ್ಮಾ ಗಾಂಧೀಜಿಯವರ ಮಾತುಗಳನ್ನು ಸ್ಮರಿಸಿದ ಸಿಎಂ, ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆಯುವಂತೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ:

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಈಗಾಗಲೇ 4,911 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಬಜೆಟ್‌ನಲ್ಲಿ ಘೋಷಿಸಿದಂತೆ ಉಳಿದ 8,000 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಇಂದು ಒಟ್ಟು 377 ಸಬ್ ಇನ್ಸ್ಪೆಕ್ಟರ್‌ಗಳು ತರಬೇತಿ ಮುಗಿಸಿ ಸೇವೆಗೆ ಸೇರ್ಪಡೆಗೊಂಡಿದ್ದಾರೆ.ತರಬೇತಿಯಲ್ಲಿ ಕಲಿತ ಅಂಶಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು

ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸರು ಪಣತೊಡಲಿ:  

ರಾಜ್ಯವನ್ನು ಮಾದಕ ವಸ್ತು ಮುಕ್ತವಾಗಿಸಲು ಸರ್ಕಾರ ಬದ್ಧವಾಗಿದ್ದು, ಪೊಲೀಸ್ ಅಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಜಾಲದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.”ಮಾದಕ ವಸ್ತುಗಳು ಯುವ ಜನಾಂಗದ ಮೇಲೆ ಭೀಕರ ಪರಿಣಾಮ ಬೀರುತ್ತಿವೆ. ಇದನ್ನು ನಿರ್ಮೂಲನೆ ಮಾಡದಿದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಹೀಗಾಗಿ, ಮಾದಕ ವಸ್ತು ತಯಾರಕರು ಮತ್ತು ಮಾರಾಟಗಾರರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು,” ಎಂದು ಅವರು ತಿಳಿಸಿದರು.

ಅಪರಾಧಿಗಳಿಗೆ ಶಿಕ್ಷೆ, ನಿರಪರಾಧಿಗಳಿಗೆ ರಕ್ಷಣೆ:

ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹದಿಂದ ಇರಬೇಕು ಮತ್ತು ಮಾನವೀಯತೆಯಿಂದ ವರ್ತಿಸಬೇಕು. “ಅಪರಾಧಿಗಳ ವಿಷಯದಲ್ಲಿ ಕರುಣೆ ತೋರುವ ಅಗತ್ಯವಿಲ್ಲ, ಆದರೆ ನಿರಪರಾಧಿಗಳಿಗೆ ನ್ಯಾಯ ಒದಗಿಸಬೇಕು. ಸೈಬರ್ ಅಪರಾಧಗಳನ್ನು ತಡೆಯಲು ತರಬೇತಿಯಲ್ಲಿ ಕಲಿತ ತಾಂತ್ರಿಕ ಕೌಶಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ,” ಎಂದು ಸಿಎಂ ಕಿವಿಮಾತು ಹೇಳಿದರು.

ಆಮಿಷಗಳಿಗೆ ಬಲಿಯಾಗಬೇಡಿ:

ಬಲಾಢ್ಯರು ತಮ್ಮ ಹಣಬಲದಿಂದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬಹುದು. ಅಂತಹ ಯಾವುದೇ ಆಮಿಷಗಳಿಗೆ ಒಳಗಾಗದೆ ಧೈರ್ಯದಿಂದ ಕೆಲಸ ಮಾಡಿ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ದೀನದಲಿತರು ಹಾಗೂ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ ಎಂದರು.

ಅಭಿವೃದ್ಧಿಗೆ ಸರ್ಕಾರದ ಬೆಂಬಲ:

ಪೊಲೀಸ್ ಇಲಾಖೆಯ ಆಧುನೀಕರಣ ಮತ್ತು ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಸದಾ ಸಿದ್ಧವಿದೆ. ಅಧಿಕಾರಿಗಳು ಯಾವುದೇ ಆತಂಕವಿಲ್ಲದೆ, ಸತ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. ನಿಮ್ಮ ಬೆನ್ನಿಗೆ ಸರ್ಕಾರ ಸದಾ ಇರುತ್ತದೆ ಎಂದು ಅವರು ಭರವಸೆ ನೀಡಿದರು.

 


Share this with Friends

Related Post