Sat. Jun 6th, 2026

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಕ್ತ ಅಭಿಯಾನ: ಪ್ರತಿ ಪಾಲಿಕೆಗೆ ಹೈಟೆಕ್ ಯಂತ್ರ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮತ್ತು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗಿಯಾದ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.

ಪ್ರತಿ ಪಾಲಿಕೆಗೂ ಗುಂಡಿ ಮುಚ್ಚುವ ಯಂತ್ರ:

ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲು ನಿರ್ಧರಿಸಲಾಗಿದ್ದು, GBA ವ್ಯಾಪ್ತಿಯ ಪ್ರತಿ ನಗರ ಪಾಲಿಕೆಗೆ ಒಂದೊಂದು ಆಧುನಿಕ ರಸ್ತೆ ಗುಂಡಿ ಮುಚ್ಚುವ ಯಂತ್ರವನ್ನು (Pothole Filling Machine) ತುರ್ತಾಗಿ ಖರೀದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ರಸ್ತೆ ಕೆಟ್ಟ ತಕ್ಷಣವೇ ಸ್ಥಳೀಯವಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿದೆ.

ರಸ್ತೆ ಕತ್ತರಿಸುವಿಕೆಗೆ ‘ಮಾರ್ಕ್ಸ್’ ಕಡ್ಡಾಯ:

ನಗರದಲ್ಲಿ ವಿವಿಧ ಕೇಬಲ್ ಅಥವಾ ಪೈಪ್‌ಲೈನ್ ಕಾಮಗಾರಿಗಳಿಗಾಗಿ ರಸ್ತೆ ಕತ್ತರಿಸಲು ಇನ್ನು ಮುಂದೆ ‘ಮಾರ್ಕ್ಸ್ ಸಾಫ್ಟ್‌ವೇರ್’ ಮೂಲಕವೇ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಾಮಗಾರಿ ಮುಗಿದ ತಕ್ಷಣ ರಸ್ತೆಯನ್ನು ಮೊದಲಿನ ಸ್ಥಿತಿಗೆ ತರುವುದು ಆಯಾ ಸಂಸ್ಥೆಗಳ ಜವಾಬ್ದಾರಿ. ಒಂದು ವೇಳೆ ಸಂಸ್ಥೆಗಳು ವಿಫಲವಾದರೆ, ಪಾಲಿಕೆಯೇ ದುರಸ್ತಿ ನಡೆಸಿ ಅದರ ಸಂಪೂರ್ಣ ವೆಚ್ಚವನ್ನು ಆ ಸಂಸ್ಥೆಗಳಿಂದಲೇ ವಸೂಲಿ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಅಲ್ಲದೆ, ಗೇಲ್ ಗ್ಯಾಸ್ ಸಂಸ್ಥೆಯ ಅರ್ಜಿಗಳಿಗೆ ಶೀಘ್ರ ಅನುಮತಿ ನೀಡಿ, ಕಾಮಗಾರಿ ನಂತರ ರಸ್ತೆ ಪುನಶ್ಚೇತನವನ್ನು ಅವರ ಮೂಲಕವೇ ಮಾಡಿಸಲು ಸೂಚಿಸಲಾಗಿದೆ.

ಅನಾಥ ವಾಹನಗಳ ತೆರವು – ಇಂದಿನಿಂದಲೇ ಟೋಯಿಂಗ್:

ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿ ಅನಾಥವಾಗಿರುವ ವಾಹನಗಳು ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಇವುಗಳನ್ನು ತೆರವುಗೊಳಿಸಲು ನಾಳೆಯಿಂದಲೇ (ಏಪ್ರಿಲ್ 7) ಟೋಯಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಉತ್ತರ ಮತ್ತು ಕೇಂದ್ರ ನಗರ ಪಾಲಿಕೆಗಳಿಂದ ಟೋಯಿಂಗ್ ವಾಹನಗಳನ್ನು ಸಂಚಾರಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಅನಧಿಕೃತ ಪಾರ್ಕಿಂಗ್‌ಗೆ ಬ್ರೇಕ್:

ನಗರದ ವೈಟ್ ಟಾಪಿಂಗ್ ಹಾಗೂ ಪ್ರಮುಖ ರಸ್ತೆಗಳಲ್ಲಿ ನಿಗದಿತ ಪಾರ್ಕಿಂಗ್ ವಲಯಗಳನ್ನು ಹೊರತುಪಡಿಸಿ ಬೇರೆಡೆ ವಾಹನ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಮುಂಗಾರು ಪೂರ್ವ ಸಿದ್ಧತೆಗೆ ವೇಗ:

ಮುಂಗಾರು ಮಳೆ ಆರಂಭವಾಗುವ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಎಲ್ಲಾ ರಾಜಕಾಲುವೆಗಳು ಮತ್ತು ರಸ್ತೆ ಬದಿಯ ಶೋಲ್ಡರ್ ಡ್ರೈನ್‌ಗಳಲ್ಲಿ (Shoulder Drains) ತುಂಬಿರುವ ಹೂಳೆತ್ತುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗಲಿದ್ದು, ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸಬಹುದಾಗಿದೆ.

ಹೆಬ್ಬಾಳ ಜಂಕ್ಷನ್ ಪುನಶ್ಚೇತನ:

ಬೆಂಗಳೂರಿನ ಪ್ರಮುಖ ಪ್ರವೇಶ ದ್ವಾರವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಜಂಟಿ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ. ಇಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಸಮಗ್ರ ನಕ್ಷೆಯನ್ನು (Integrated Map) ಸಿದ್ಧಪಡಿಸುವಂತೆ ಆಯುಕ್ತರು ಆದೇಶಿಸಿದ್ದಾರೆ.

ಕೆ-100 ಜಲಮಾರ್ಗ ಸಂರಕ್ಷಣೆ:

ನಗರದ ಮಹತ್ವಾಕಾಂಕ್ಷೆಯ ‘ಕೆ-100’ ಜಲಮಾರ್ಗಕ್ಕೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಡೆಯಲು ಜಲಮಂಡಳಿಗೆ (BWSSB) ಸೂಚಿಸಲಾಗಿದೆ. ನೀರಿನ ಶುದ್ಧತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ತಾಂತ್ರಿಕ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.

 


Share this with Friends

Related Post