ಹಾಸನ,ಏ.30: ಶಾಸಕ ಎಚ್.ಡಿ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಸಂಬಂಧ ಐವರು ಮಹಿಳೆಯರಿಂದ ಎಸ್ ಐ ಟಿ ಮಾಹಿತಿ ಕಲೆಹಾಕಿದೆ.
ಜತೆಗೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದೆ.
ವಿಡಿಯೋಗಳ ಆಧಾರದ ಮೇಲೆ ಐವರು ಮಹಿಳೆಯರನ್ನು ಎಸ್‌ಐಟಿಯ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಸಂತ್ರಸ್ತರು ಆರೋಪಿಗಳ ಸಂಪರ್ಕಕ್ಕೆ ಬಂದಿದ್ದು ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ವಿಡಿಯೋಗಳನ್ನು ಯಾರು ರೆಕಾರ್ಡ್ ಮಾಡಿದ್ದಾರೆ, ಯಾರನ್ನಾದರೂ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸಂತ್ರಸ್ತರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಗಳನ್ನು ಮಹಿಳಾ ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ.
ಎಸ್‌ಐಟಿ ತಂಡವು ಹಾಸನದಲ್ಲಿರುವ ರೇವಣ್ಣ ನಿವಾಸ ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಿದೆ.