ಬೆಂಗಳೂರು: ರಾಜಧಾನಿ ಬೆಂಗಳೂರಿನ ಐಟಿ ವಲಯದಲ್ಲಿ ಪೊಲೀಸರು ನಡೆಸಿದ ‘ಆಪರೇಷನ್ ಮುಕ್ತಾ’ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆಯ ಬೆನ್ನಲ್ಲೇ, ದೇಶದ ಭದ್ರತೆ ಮತ್ತು ಗಡಿ ಕಾವಲಿನ ವಿಷಯವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಒಳಗೆ ವಿದೇಶಿಗರು ಅಕ್ರಮವಾಗಿ ನುಸುಳದಂತೆ ತಡೆಯುವ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇಂದ್ರದ ವೈಫಲ್ಯಕ್ಕೆ ಸಚಿವರ ಪ್ರಶ್ನೆ:
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೆಂಗಳೂರು ನಗರ ಪೊಲೀಸರು ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಮೂಲಭೂತವಾಗಿ ಇಂತಹ ಅಕ್ರಮ ವಲಸಿಗರು ದೇಶದ ಗಡಿಯನ್ನು ದಾಟಿ ಒಳಗೆ ಪ್ರವೇಶಿಸಲು ಹೇಗೆ ಸಾಧ್ಯವಾಗುತ್ತಿದೆ? ದೇಶದ ಗಡಿಗಳನ್ನು ಕಾಯುವ, ಬಿಎಸ್‌ಎಫ್ (BSF) ನಂತಹ ಭದ್ರತಾ ಪಡೆಗಳನ್ನು ನಿಯಂತ್ರಿಸುವ ಹಾಗೂ ವೀಸಾ ಮತ್ತು ಪೌರತ್ವ ದಾಖಲೆಗಳನ್ನು ಪರಿಶೀಲಿಸುವ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಗಡಿ ಭದ್ರತೆಯಲ್ಲಿ ಆಗುತ್ತಿರುವ ಲೋಪಗಳೇ ಇಂತಹ ಅಕ್ರಮ ವಲಸೆಗೆ ಮುಖ್ಯ ಕಾರಣ” ಎಂದು ಅವರು ಆಕ್ಷೇಪಿಸಿದರು.
ರಾಜ್ಯ ಪೊಲೀಸರ ದಕ್ಷತೆಗೆ ಶ್ಲಾಘನೆ:
ಇದೇ ವೇಳೆ ಬೆಂಗಳೂರು ಪೊಲೀಸರ ಮುಂಜಾನೆಯ ಜಂಟಿ ಕಾರ್ಯಾಚರಣೆಯನ್ನು ಶ್ಲಾಘಿಸಿದ ಅವರು, “ರಾಜ್ಯ ಸರ್ಕಾರ ಮತ್ತು ನಮ್ಮ ಪೊಲೀಸ್ ಇಲಾಖೆಯು ನಗರದ ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆಹಚ್ಚುವ ಕೆಲಸವನ್ನು ರಾಜ್ಯ ಖಾಕಿ ಪಡೆ ದಕ್ಷತೆಯಿಂದ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರವು ತನ್ನ ಗಡಿ ನಿರ್ವಹಣೆಯ ಜವಾಬ್ದಾರಿಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ನಿಭಾಯಿಸಿದರೆ ಮಾತ್ರ ಇಂತಹ ಸಮಸ್ಯೆಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದು ಅವರು ಸ್ಪಷ್ಟಪಡಿಸಿದರು.
ಲೈಕ್, ಶೇರ್‌ಗಾಗಿ ಪೊಲೀಸ್ ತನಿಖೆ ದಿಕ್ಕು ತಪ್ಪಿಸಿದರೆ ಕಠಿಣ ಕ್ರಮ;
ರಾಜ್ಯದಲ್ಲಿ ಅಕ್ರಮ ವಲಸಿಗರ ಪತ್ತೆ ಮತ್ತು ತನಿಖೆಯ ಪ್ರಕ್ರಿಯೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆಯಲು ಮತ್ತು ತನಿಖೆಯ ಗೋಪ್ಯ ಮಾಹಿತಿಯನ್ನು ಬಹಿರಂಗಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ, ಲೈಕ್ ಹಾಗೂ ಶೇರ್‌ಗಳಿಗಾಗಿ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸುವ ಸೋಶಿಯಲ್ ಮೀಡಿಯಾ ಆಕ್ಟಿವಿಸಂಗೆ ಕಡಿವಾಣ ಹಾಕಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
ತನಿಖೆ ದಿಕ್ಕು ತಪ್ಪಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರಚಾರಕ್ಕಾಗಿ ವಿವಿಧ ಸ್ಥಳಗಳಿಗೆ ತೆರಳಿ, ಅಲ್ಲಿನ ವ್ಯಕ್ತಿಗಳ ಗುರುತು, ಊರು ಹಾಗೂ ರಾಜ್ಯದ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದ್ದಾರೆ. “ಇಂತಹ ಬೇಜವಾಬ್ದಾರಿಯುತ ನಡವಳಿಕೆಯಿಂದ ಪೊಲೀಸ್ ತನಿಖೆ ದಿಕ್ಕು ತಪ್ಪುತ್ತಿದೆ. ಅಕ್ರಮ ವಲಸಿಗರ ಜಾಲದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮುಂಚಿತವಾಗಿಯೇ ಮಾಹಿತಿ ಹಂಚಿಕೊಳ್ಳುವುದರಿಂದ ಆ ಅಕ್ರಮ ಜಾಲಗಳಿಗೆ ಎಚ್ಚರಗೊಳ್ಳಲು ಇನ್ನಷ್ಟು ಅನುಕೂಲವಾಗುತ್ತದೆ. ಇದು ರಾಜ್ಯದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸೌಹಾರ್ದತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ” ಎಂದು ಗೃಹ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ನೈತಿಕ ಪೊಲೀಸ್‌ಗಿರಿಗೆ ಆಸ್ಪದವಿಲ್ಲ; ಮಾಹಿತಿ ಇದ್ದರೆ ಪೊಲೀಸರಿಗೆ ನೀಡಿ
ಯಾರಿಗಾದರೂ ಅಕ್ರಮ ವಲಸೆ, ನಕಲಿ ಗುರುತಿನ ಚೀಟಿಗಳು ಅಥವಾ ಅಕ್ರಮ ಉದ್ಯೋಗದ ಕುರಿತು ನಿಖರ ಮಾಹಿತಿ ಇದ್ದರೆ ಅದನ್ನು ನೇರವಾಗಿ ಪೊಲೀಸ್ ಇಲಾಖೆಗೆ ತಲುಪಿಸಬೇಕು. ಅದರ ಬದಲು ಕಾನೂನನ್ನು ಕೈಗೆತ್ತಿಕೊಳ್ಳುವುದು ಅಥವಾ ನೈತಿಕ ಪೊಲೀಸ್‌ಗಿರಿ (Moral Policing) ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. “ಪೊಲೀಸರ ಕಾರ್ಯಾಚರಣೆಗಳಲ್ಲಿ ಗೋಪ್ಯತೆ ಕಾಪಾಡುವುದು ಮುಖ್ಯವಾಗಿರುತ್ತದೆ. ಹೀಗಾಗಿ ಪ್ರತಿಯೊಂದು ಹೆಜ್ಜೆಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ರಾಜ್ಯದ ಹಿತ ಬಯಸುವವರು ಸರಿಯಾದ ಮಾರ್ಗದಲ್ಲಿ ಪೊಲೀಸರೊಂದಿಗೆ ಕೈಜೋಡಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
ಮೂಲ ಜಾಲ ಸೀಳಲು ಖಾಕಿ ಪಡೆ ಸಮರ್ಥ
ಅಕ್ರಮವಾಗಿ ವಲಸೆ ಬಂದವರಿಗೆ ಭಾರತೀಯ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ನಕಲಿ ದಾಖಲೆಗಳು ಹೇಗೆ ದೊರೆತಿವೆ? ಅವರಿಗೆ ಉದ್ಯೋಗ ಒದಗಿಸಿದ ಮಾಲೀಕರು ಯಾರು? ಮತ್ತು ಅವರ ದಾಖಲೆಗಳ ಪರಿಶೀಲನೆಯಲ್ಲಿ ಲೋಪವಾಗಿದ್ದು ಎಲ್ಲಿ? ಎಂಬ ಮೂಲ ಜಾಲವನ್ನು ಪತ್ತೆಹಚ್ಚುವ ಪೂರ್ಣ ಜವಾಬ್ದಾರಿ ಪೊಲೀಸರದ್ದಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯು ಇಂತಹ ಪ್ರಕರಣಗಳನ್ನು ಅತ್ಯಂತ ಸಮರ್ಥವಾಗಿ ಮತ್ತು ಗಂಭೀರವಾಗಿ ನಿಭಾಯಿಸುತ್ತಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ

